ವೀರಾಜಪೇಟೆ, ಸೆ. ೬: ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ (ಮಹಾಗಣಪತಿ ಆಂಜನೇಯ) ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಸಂಭ್ರಮ ಕಳೆಗಟ್ಟಿದೆ. ಶ್ರೀ ಬಾಲಾಂಜನೇಯ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ೧೦ನೇ ವರ್ಷದ ಗೌರಿ ಗಣೇಶ ಪ್ರತಿಷ್ಠಾಪನಾ ಮಹೋತ್ಸವವನ್ನು ವಿಜೃಂಭಣೆ ಮತ್ತು ಸಾಂಸ್ಕöÈತಿಕ ವೈಭವದೊಂದಿಗೆ ಸಂಘಟಿಸಲಾಗಿದೆ.

ಅಪ್ಪಯ್ಯ ಸ್ವಾಮಿ ರಸ್ತೆ, ನ್ಯೂ ಎಕ್ಸ್ಟೆನ್ಸನ್ ಹಾಗೂ ತಿಮ್ಮಯ್ಯ ಲೇಔಟ್‌ಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಹೆಚ್ಚಿನವರು ಈ ಹಿಂದೆ ಅಕ್ಕಪಕ್ಕದಲ್ಲಿದ್ದರೂ ಅಪರಿಚಿತರಂತೆ ಜೀವಿಸುತ್ತಿದ್ದರು. ಆದರೆ, ಕಳೆದ ೧೦ ವರ್ಷಗಳಿಂದ ಈ ಗಣೇಶೋತ್ಸವ ಸಮಿತಿಯು ನಡೆಸಿಕೊಂಡು ಬರುತ್ತಿರುವ ಗೌರಿ ಗಣೇಶೋತ್ಸವವು ಎಲ್ಲರನ್ನೂ ಒಂದೆಡೆ ತಂದು ನಿಲ್ಲಿಸಿದೆ. ಉತ್ಸವದ ನೆಪದಲ್ಲಿ ಎಲ್ಲರೂ ಒಟ್ಟಾಗಿ ಸೇರಿ, ಸೋದರತ್ವದಿಂದ ಬದುಕುವ ಸುಂದರ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ.

ಗೌರಿ ಗಣೇಶೋತ್ಸವ ಸಮಿತಿಗೆ ಕಳೆದ ೯ ವರ್ಷಗಳ ಕಾಲ ಪಾಂಡAಡ ರಚನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಅಂಜಪರವAಡ ಅನಿಲ್ ಮಂದಣ್ಣ ಅಧ್ಯಕ್ಷರಾಗಿ ಉತ್ಸವವನ್ನು ಮುನ್ನಡೆಸುತ್ತಿದ್ದಾರೆ. ೮೪ ಸಕ್ರಿಯ ಸದಸ್ಯರನ್ನು ಹೊಂದಿರುವ ಈ ಸಮಿತಿಯಲ್ಲಿ ಶಾನ್ ಚಂಗಪ್ಪ, ಚೇತನ್, ಶಶಿಕುಮಾರ್, ಮಾಳೇಟಿರ ಸುಫಿನ್, ಹೇಮಂತ್, ಸಂದೀಪ್ ಸೇರಿದಂತೆ ಹಲವು ಸ್ಥಳೀಯರು ಮುಂಚೂಣಿಯಲ್ಲಿದ್ದು ಶ್ರಮಿಸುತ್ತಿದ್ದಾರೆ. ದೇವಾಲಯದ ಧರ್ಮದರ್ಶಿ ಬಾಬಾಶಂಕರ್ ಮಾರ್ಗದರ್ಶಕರಾಗಿದ್ದಾರೆ.

ಸಮಿತಿಯು ಯಾವುದೇ ಹೊರಗಿನ ದೇಣಿಗೆ ಅಥವಾ ಸಹಾಯವನ್ನು ಪಡೆಯದೆ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳಿಂದ ಹಣ ಸಂಗ್ರಹಿಸಿ ಉತ್ಸವವನ್ನು ಶಿಸ್ತಿನಿಂದ ನಡೆಸುತ್ತಿದ್ದಾರೆ. ಉತ್ಸವದ ದಿನಗಳಲ್ಲಿ ಪ್ರತಿದಿನ ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರುತ್ತದೆ. ಪ್ರತಿ ವರ್ಷವೂ ನವನವೀನ ಮಾದರಿಯ ಕಲಾಕೃತಿಗಳನ್ನು ಒಳಗೊಂಡ ಸ್ತಬ್ಧಚಿತ್ರಗಳನ್ನು ಸಮಿತಿಯು ಸಿದ್ಧಪಡಿಸುತ್ತದೆ. ಗಣೇಶೋತ್ಸವವನ್ನು ಆಚರಿಸುವುದು ಮಾತ್ರವಲ್ಲದೆ, ಉತ್ಸವದಲ್ಲಿ ಉಳಿಕೆಯಾಗುವ ಹಣವನ್ನೂ ದೇವಾಲಯದ ಮೂಲಸೌಕರ್ಯ ಹಾಗೂ ಅಭಿವೃದ್ಧಿಗಾಗಿಯೇ ಸಮಿತಿ ವಿನಿಯೋಗಿಸುತ್ತಿದೆ.

ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿರುವ ಶ್ರೀ ಬಾಲಾಂಜನೇಯ ದೇವಾಲಯವು ಸುಮಾರು ೨೦೦ಕ್ಕೂ ಹೆಚ್ಚು ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪ್ರಸ್ತುತ ದೇವಾಲಯದ ಧರ್ಮದರ್ಶಿಗಳಾಗಿ ಬಾಬಾ ಶಂಕರ್ ಅವರು ಕಾರ್ಯನಿರ್ವಹಿಸುತ್ತಿದ್ದು, ಇವರ ಕುಟುಂಬವು ೫ನೇ ತಲೆಮಾರಿನಿಂದ ಪಾರಂಪರಿಕವಾಗಿ ದೇವಾಲಯದ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.

- ರಜಿತ ಕಾರ್ಯಪ್ಪ,

ವೀರಾಜಪೇಟೆ.

ಮೊ: ೯೪೮೧೭೭೧೮೫೧