ಶ್ರೀಮಂಗಲ, ಸೆ. ೬: ಪೊನ್ನಂಪೇಟೆ ತಾಲೂಕಿನ ಕಾನೂರಿನಲ್ಲಿ ಬೆಕ್ಕೆಸೊಡ್ಲೂರು ಕಾನೂರು ಬ್ರಹ್ಮಗಿರಿ ನಿಟ್ಟೂರು ಸಂಪರ್ಕಿಸುವ ರೂ.೫.೩೦ ಕೋಟಿ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನು ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಉದ್ಘಾಟನೆ ಮಾಡಿದರು.

ಈ ಸಂದರ್ಭ ನಡೆದ ಸಭೆಯಲ್ಲಿ ಮಾತನಾಡಿದ ಅವರು ರಸ್ತೆಗಳನ್ನು ಮಾಡುವುದು ಸರ್ಕಾರ ಮತ್ತು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಗುಡ್ಡಗಾಡು ಪ್ರದೇಶವಾಗಿದ್ದು ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ರಸ್ತೆ ಕೆಲಸ ನಿರಂತರವಾಗಿರುವ ಕೆಲಸವಾಗಿದ್ದು ನಡೆಯುತ್ತಲೇ ಇರಬೇಕು, ಇಂದಿಗೆ ಅಥವಾ ನಾಳೆಗೆ ನಿಲ್ಲುವಂತಹ ಕೆಲಸ ಅಲ್ಲ ಎಂದು ಪೊನ್ನಣ್ಣ ಅವರು ಹೇಳಿದರು.

ಅನೇಕ ಟೀಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಎದುರಿಸುತ್ತಿದ್ದೇವೆ. ನಾವು ರಸ್ತೆಗಳನ್ನು ಉದ್ದೇಶಪೂರ್ವಕವಾಗಿ ಗುಂಡಿಗಳನ್ನು ಮಾಡುತ್ತಿಲ್ಲ ಎಂದರು.

ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಇಂಜಿನಿಯರ್‌ಗಳು, ಸಹಾಯಕ ಇಂಜಿನಿಯರ್‌ಗಳು ಉಪಸ್ಥಿತಿಯಲ್ಲಿ ಪರಿಷ್ಕರಣೆ ಸಭೆ ನಡೆಸಲಾಯಿತು, ಕ್ಷೇತ್ರಕ್ಕೆ ಮೂರು ವರ್ಷಗಳಲ್ಲಿ ರೂ. ೨೨೮ ಕೋಟಿ ಅನುದಾನವನ್ನು ತಂದು ಮೇಜರ್ ಡಿಸ್ಟ್ರಿಕ್ಟ್ ರೋಡ್, ಸ್ಟೇಟ್ ಹೈವೇ ಕಾಮಗಾರಿಗಳನ್ನು ವೀರಾಜಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿದೆ. ಇದಲ್ಲದೆ ಮಳೆಯ ನಂತರ ೭೫ -೮೦ ಕೋಟಿ ಅನುದಾನದ ಕಾಮಗಾರಿ ಟೆಂಡರ್ ವೀರಾಜಪೇಟೆ ಮೂರ್ನಾಡು ಮಡಿಕೇರಿ, ನಾಪೋಕ್ಲು ಭಾಗದ ಕೆಲವು ರಸ್ತೆಗಳು, ಹುದಿಕೇರಿ ಭಾಗದ ರಸ್ತೆಗಳು ಸಹ ಪೂರ್ಣಗೊಳ್ಳುತ್ತದೆ. ಮತ್ತೆ ಈ ವರ್ಷ ಹಾಗೂ ಮುಂದಿನ ವರ್ಷ ಬರುವ ಅನುದಾನದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಮಾಡುವುದು ನಮ್ಮ ಜವಾಬ್ದಾರಿ ಅದನ್ನು ಮಾಡಿಯೇ ಮಾಡುತ್ತೇವೆ ಎಂದು ಅವರು ಹೇಳಿದರು.

ಆದರೆ ಅದನ್ನೇ ಮುಂದಿಟ್ಟುಕೊAಡು ರಾಜಕೀಯ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ಹುದಿಕೇರಿ ಸಮೀಪ ಪೋಕಳೆತೋಡು ಹೊಸ ಸೇತುವೆ ಕಾಮಗಾರಿಯಾಗುತ್ತಿದೆ. ನಾವು ಅಧಿಕಾರಕ್ಕೆ ಬಂದು ಸೇತುವೆ ಕಟ್ಟುತ್ತಿದ್ದೇವೆ. ಈ ಹಿಂದೆ ಹಾನಿಯಾಗಿ ಅಪಾಯದಲ್ಲಿದ್ದ ಸೇತುವೆ ನಿರ್ಮಾಣ ಮಾಡಬೇಕಾಗಿದೆ. ಈ ಸಂದರ್ಭ ಬೈಪಾಸ್ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಅದನ್ನು ಕಾಂಕ್ರೀಟ್ ಮಾಡಲು ಆಗುವುದಿಲ್ಲ. ಸೇತುವೆ ಪೂರ್ಣವಾಗಿದೆ ಮುಖ್ಯರಸ್ತೆಯನ್ನು ತೆರೆದು ಸಂಚಾರ ಸುಗಮವಾಗಲಿದೆ. ಆದರೆ ಬೈಪಾಸ್ ಮಾಡಿದ ಮಣ್ಣಿನ ರಸ್ತೆಯ ಫೋಟೋ ತೆಗೆದು ಬಿಜೆಪಿ ಪಕ್ಷದವರು ಟೀಕೆ ಮಾಡುತ್ತಾರೆ. ಆದರೆ ಹೊರಗಿನವರಿಗೆ ವಾಸ್ತವಂಶ ಗೊತ್ತಿರುವುದಿಲ್ಲ. ಈ ಈ ಕೀಳು ಮಟ್ಟದ ರಾಜಕೀಯ ಮಾಡಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಸ್ತೂರಿರಂಗನ್ ವರದಿಯ ಬಗ್ಗೆ ಪ್ರಸ್ತಾಪಿಸಿದ ಅವರು ಈ ವರದಿಯಿಂದ ಈ ಭಾಗದ ಅನೇಕ ಜನರಿಗೆ ಆತಂಕವಿದೆ. ರೈತರಿಗೆ ಬೆಳೆಗಾರರಿಗೆ ಸಮಸ್ಯೆ ಆಗಬಾರದು ಎಂದ ಅವರು, ವಿಧಾನಸಭೆಯಲ್ಲಿ ಕಸ್ತೂರಿರಂಗನ್ ವರದಿ ವಿಚಾರ ಪ್ರಸ್ತಾಪ ಸಂದರ್ಭ ವಿರೋಧ ಪಕ್ಷದ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಮಾನವ ಮತ್ತು ಕಾಡಾನೆ ಸಂಘರ್ಷ

ಮಾನವ ಮತ್ತು ಕಾಡಾನೆ ಸಂಘರ್ಷ ವನ್ಯಪ್ರಾಣಿ ಹಾವಳಿ ಬಗ್ಗೆ, ಅರಣ್ಯ ಸಚಿವರ ಗಮನ ಸೆಳೆದು ಒತ್ತಡ ಹಾಕಿ ಜಿಲ್ಲೆಗೆ ಕರೆತಂದು ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗಿದೆ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಭದ್ರ ಮೀಸಲು ಅರಣ್ಯದಲ್ಲಿ ೭,೫೦೦ ಎಕರೆ ಜಾಗ ಗುರುತಿಸಿ ಕಾಡಾನೆ ಗಳನ್ನು ಹಿಡಿದು ಅಲ್ಲಿಗೆ ಸ್ಥಳಾಂತರಿಸಲು ಯೋಜನೆ ಜಾರಿಗೆ ತರಲಾಗಿದ್ದು, ಇದು ಟೆಂಡರ್ ಹಂತದಲ್ಲಿದೆ. ಕಾಡಾನೆ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿದ್ಯುತ್ ಕಾಮಗಾರಿ

ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ೧೦ ಹೊಸ ಉಪಕೇಂದ್ರಗಳನ್ನು ಮಂಜೂರು ಮಾಡಲಾಗಿದ್ದು ಇದರಲ್ಲಿ ೩೩/೧೧ರ ಸಾಮರ್ಥ್ಯ ದ ೨ ಮತ್ತು ೬೬/೧೧ರ ಸಾಮರ್ಥ್ಯದ ೮ ಉಪಕೇಂದ್ರಗಳಾಗಿವೆ. ಹುದಿಕೇರಿ, ಬಾಳೆಲೆ, ಸಿದ್ದಾಪುರ, ಮೂರ್ನಾಡುಗಳಲ್ಲಿ ಕಾಮಗಾರಿ ಆರಂಭವಾಗಿದೆ. ಭಾಗಮಂಡಲ, ಕಳತ್ಮಾಡು, ಸಂಪಾಜೆ,ಕಾಟಗೇರಿಗಳಲ್ಲಿ ಪ್ರಾರಂಭವಾಗಲಿದೆ. ಚೆಪ್ಪುಡಿರ ಸೋಮಯ್ಯ ಅವರು ಮಾತನಾಡಿ ಈ ವ್ಯಾಪ್ತಿಯಲ್ಲಿ ೭ ಕಿ.ಮೀ ರಸ್ತೆ, ಗುಂಡಿ ಬಿದ್ದು ಕಳೆದ ಹಲವಾರು ವರ್ಷಗಳಿಂದ ಜನರಿಗೆ ತೀವ್ರ ಸಂಕಷ್ಟವಾಗಿತ್ತು ಇದನ್ನು ಉತ್ತಮವಾಗಿ ನಿರ್ಮಿಸಿಕೊಟ್ಟ ಶಾಸಕರ ಬಗ್ಗೆ ಪ್ರಸಂಸೆ ವ್ಯಕ್ತಪಡಿಸಿ ಗ್ರಾಮಸ್ಥರ ಪರವಾಗಿ ಶಾಸಕರನ್ನು ಸನ್ಮಾನಿಸಿದರು.

ಈ ಸಂದರ್ಭ ಶಾಸಕರ ಪತ್ನಿ ಕಾಂಚನ್ ಪೊನ್ನಣ್ಣ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೇರಿರ ನವೀನ್, ಹಿರಿಯರಾದ ಮೂಕಳೇರ ಕುಶಾಲಪ್ಪ, ಚಿರಿಯಪಂಡ ನಾಣಯ್ಯ, ರುಕ್ಮಿಣಿ ನಾಣಯ್ಯ, ಚೆಪ್ಪುಡೀರ ಸೋಮಯ್ಯ, ಚೆಪ್ಪುಡೀರ ಟ್ಯಾಗೂ ಮೊಣ್ಣಪ್ಪ,ವಲಯ ಅಧ್ಯಕ್ಷರಾದ ರಮೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಮಾಜಿ ಜಿ. ಪಂ. ಸದಸ್ಯರಾದ ಬಾನಂಡ ಪ್ರತ್ಯು, ಎರ್ಮು ಹಾಜಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪದವಿ ಧನ್ಯ, ಪಂಚಾಯಿತಿ ಸದಸ್ಯ ಬೋಪಣ್ಣ, ಪಕ್ಷದ ಮುಖಂಡರು ಕೇಚಮಾಡ ಸಿದ್ದು ನಾಚಪ್ಪ, ಮಾಚಮಾಡ ಮನು, ತಾಣಚ್ಚಿರ ನಿಖಿಲ್, ಸೋಮಯ್ಯ,ಹಾಗೂ ಪ್ರಮುಖರು ಉಪಸ್ಥಿತರಿದ್ದರು.