ಮಡಿಕೇರಿ, ಸೆ.೫: ಕೊಡಗು ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಸಕರ ಶಾಸಕ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಸೇರಿಸಿ ತಂತ್ರಜ್ಞಾನಾಧಾರಿತ ಶಿಕ್ಷಣ ಒದಗಿಸಲು ಯೋಜನೆ ರೂಪಿಸಲಾಗುವುದು ಎಂದು ಕೃಷಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇAದ್ರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ಸಂಯುಕ್ತಾಶ್ರಯದಲ್ಲಿ ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಜಿಲ್ಲೆಯ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಟ್ಯಾಬ್ ನೀಡಲು ವೆಚ್ಚವಾಗಲಿದ್ದು, ಶಾಸಕರು ತಲಾ ರೂ.೨೫ ಲಕ್ಷ ಹಾಗೂ ಖಾಸಗಿ ಸಂಸ್ಥೆಗಳ ಸಿಎಸ್ಆರ್ ನಿಧಿಯಿಂದ ಉಳಿದ ಮೊತ್ತ ಭರಿಸಿ ಯೋಜನೆಯನ್ನು ಶೇ.೧೦೦ ರಷ್ಟು ಪೂರ್ಣಗೊಳಿಸಲು ಯೋಜನೆ ರೂಪಿಸಲು ಚಿಂತಿಸುವAತೆ ಸಚಿವರು ಸಲಹೆ ನೀಡಿದರು.
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಅಂಕಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ ಕೇವಲ ಅಂಕಗಳೇ ಬುದ್ಧಿವಂತಿಕೆ ಅಥವಾ ಪ್ರತಿಭೆಯ ಮಾನದಂಡವಲ್ಲ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ಸೃಜನಶೀಲತೆ, ಆತ್ಮವಿಶ್ವಾಸ, ಮಾನವೀಯ ಅಂತಃಕರಣ ಮತ್ತು ಬದುಕಿನ ಬಗ್ಗೆ ಸಮಗ್ರ ದೃಷ್ಟಿಕೋನವನ್ನು ಬೆಳೆಸುವ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ.
ಇಂದಿನ ದಿನಗಳಲ್ಲಿ ಮಕ್ಕಳ ಕೈಯಲ್ಲಿ ಪುಸ್ತಕದ ಜೊತೆಗೆ ಮೊಬೈಲ್ ಕೂಡ ಇದೆ. ಗೂಗಲ್ನಲ್ಲಿ ಹುಡುಕಿದರೆ ಸಾವಿರಾರು ಉತ್ತರಗಳು ದೊರೆಯುತ್ತವೆ. ಕೃತಕ ಬುದ್ಧಿಮತ್ತೆ ಯಾವುದೇ ಪ್ರಶ್ನೆಗೂ ಕ್ಷಣಾರ್ಧದಲ್ಲಿ ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಆದರೆ ಸರಿಯಾದ ಪ್ರಶ್ನೆಯನ್ನು ಹೇಗೆ ಕೇಳಬೇಕು ಎಂಬುದನ್ನು ಕಲಿಸುವವರು ಶಿಕ್ಷಕರು. ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನಾ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಬೆಳೆಸುವವರೂ ಶಿಕ್ಷಕರೇ ಆಗಿದ್ದಾರೆ. ಹೀಗಾಗಿ ಎಐ ಯುಗದಲ್ಲಿಯೂ ಶಿಕ್ಷಕರ ಮಹತ್ವ ಕಡಿಮೆಯಾಗುವುದಿಲ್ಲ. ಬದಲಾಗಿ ತಂತ್ರಜ್ಞಾನದ ಸವಾಲುಗಳ ನಡುವೆ ವಿದ್ಯಾರ್ಥಿಗಳಿಗೆ ಸರಿಯಾದ ದಿಕ್ಕು ತೋರಿಸುವ ಶಿಕ್ಷಕರ ಪಾತ್ರ ಇನ್ನಷ್ಟು ಮಹತ್ವ ಪಡೆಯುತ್ತದೆ. ಈ ಜವಾಬ್ದಾರಿಯನ್ನು ಅರಿತು ಶಿಕ್ಷಕರು ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಬೇಕು ಎಂದು ಸಚಿವರು ನುಡಿದರು.
ರಾಷ್ಟçದ ಮಕ್ಕಳನ್ನು ನಾಳಿನ ಶ್ರೇಷ್ಠ ನಾಗರಿಕರನ್ನಾಗಿ ರೂಪಿಸುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು ಎಂದು ಡಾ. ರಾಧಾಕೃಷ್ಣನ್ ಪ್ರತಿಪಾದಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಕ್ಷಕರ ದಿನಾಚರಣೆ ಕೇವಲ ಶಿಕ್ಷಕರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಇಂದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳ ಮನೋಸ್ಥಿತಿಯ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವಾಗಬೇಕಿದೆ.
ಹೋAವರ್ಕ್ ಮಾಡಿದರೆ ಮಾತ್ರ ಮಗುವಿನ ಕಲಿಕೆ ಪರಿಪೂರ್ಣವಾಗುತ್ತದೆ ಎಂಬ ಕಲ್ಪನೆಯಿಂದ ಹೊರಬರಬೇಕಿದೆ. ಮಕ್ಕಳಲ್ಲಿ ಶಾಲೆಯ ಪಠ್ಯ ಕಲಿಕೆಯ ಹೊರತಾಗಿಯೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಸಹಜ ಕುತೂಹಲ ಇರುತ್ತದೆ. ಆ ಕುತೂಹಲವನ್ನು ಗೌರವಿಸಿ, ಪ್ರಶ್ನಿಸುವ ಮತ್ತು ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯವನ್ನು ಬೆಳೆಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಸಚಿವರು ನುಡಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಸಮಾಜ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಅನೇಕ ಬದಲಾವಣೆಗಳಿಗೆ ಹೊಂದಿಕೊAಡು ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲದೆ, ಸಮಾಜದ ಭವಿಷ್ಯ ರೂಪಿಸುವ ಮಹತ್ತರ ಜವಾಬ್ದಾರಿ ಹೊತ್ತವರಾಗಿದ್ದಾರೆ. ಶಿಕ್ಷಕರಿಗೆ ಸಮಾಜದಲ್ಲಿ ವಿಶೇಷ ಗೌರವವಿದ್ದು, ಆ ಗೌರವಕ್ಕೆ ತಕ್ಕಂತೆ ಮುಂದಿನ ಪೀಳಿಗೆಯನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಕಾರ್ಯವನ್ನು ಶಿಕ್ಷಕರು ನಿರ್ವಹಿಸಬೇಕಿದೆ.
ಇಂದಿನ ಮಕ್ಕಳು ಬುದ್ಧಿವಂತರು ಹಾಗೂ ಪ್ರಜ್ಞಾವಂತರಾಗಿದ್ದು, ಅವರ ಬುದ್ಧಿ ಮತ್ತು ಪ್ರಜ್ಞೆಗೆ ಉತ್ತಮ ಶಿಕ್ಷಣದ ಮಾರ್ಗದರ್ಶನ ದೊರೆತಾಗ ಸಮಾಜಕ್ಕೆ ಹಾಗೂ ದೇಶಕ್ಕೆ ಮಹತ್ತರ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ದೇಶದ ಭವಿಷ್ಯವಾಗಿರುವ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಶಿಕ್ಷಕರು ಕೇವಲ ಪಾಠ ಬೋಧಿಸುವ ಕೆಲಸಕ್ಕೆ ಸೀಮಿತರಾಗದೆ, ಮಕ್ಕಳ ಇಡೀ ಬದುಕಿನ ಮೇಲೆ ಪರಿಣಾಮ ಬೀರುವ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಪ್ರತಿಯೊಬ್ಬ ವ್ಯಕ್ತಿಯೂ ತಾನು ಪಡೆದ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳುವ ಬದಲು ಮುಂದಿನ ಪೀಳಿಗೆಗೆ ಹಂಚುವುದರಿAದ ಸಮಾಜದ ಬೆಳವಣಿಗೆ ಸಾಧ್ಯವಾಗುತ್ತದೆ.
ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಅತ್ಯಗತ್ಯವಾಗಿದೆ. ಶಿಕ್ಷಕರು ಒಂದು ಅವಧಿಯಲ್ಲಿ ಕೆಲವೇ ನಿಮಿಷ ಅಥವಾ ಒಂದು ಗಂಟೆ ಪಾಠ ಮಾಡಿದ್ದರೂ, ಆ ಬೋಧನೆಯ ಪ್ರಭಾವ ಮಗುವಿನ ಇಡೀ ಜೀವನದ ಮೇಲೆ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.
ಶಕ್ತಿ ದಿನಪತ್ರಿಕೆ ಸಲಹಾ ಸಂಪಾದಕರಾದ ಬಿ.ಜಿ.ಅನಂತ ಶಯನ ಮಾತನಾಡಿ, ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಎಷ್ಟೇ ಮುನ್ನಡೆ ಸಾಧಿಸಿದರೂ, ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಭೌತಿಕ ಉಪಸ್ಥಿತಿ ಮತ್ತು ಅವರ ಮಾರ್ಗದರ್ಶನಕ್ಕೆ ಯಾವುದೇ ಪರ್ಯಾಯವಿಲ್ಲ.
ಇಂದಿನ ದಿನಗಳಲ್ಲಿ ಗೂಗಲ್, ಚಾಟ್ ಜಿಪಿಟಿ, ಕ್ಯಾಲ್ಕುಲೇಟರ್ ಹಾಗೂ ಕೃತಕ ಬುದ್ಧಿಮತ್ತೆ ಯಾವುದೇ ಪ್ರಶ್ನೆಗೆ ತಕ್ಷಣವೇ ಉತ್ತರ ನೀಡಬಲ್ಲವು. ಆದರೆ ಮಗು ಪರೀಕ್ಷೆಯಲ್ಲಿ ವಿಫಲವಾದಾಗ ಅಥವಾ ತಪ್ಪು ಮಾಡಿದಾಗ, ಅದರ ಹೆಗಲ ಮೇಲೆ ಕೈಹಾಕಿ 'ನಾನಿದ್ದೇನೆ, ಧೈರ್ಯಗೆಡಬೇಡ, ಮುಂದೆ ಸರಿಪಡಿಸಿಕೊ' ಎಂದು ಆತ್ಮವಿಶ್ವಾಸ ತುಂಬುವ ಗುಣ ತಂತ್ರಜ್ಞಾನಕ್ಕಿಲ್ಲ. ಮಗುವಿಗೆ ಧೈರ್ಯ ತುಂಬಲು ಮತ್ತು ಶಿಕ್ಷಣ ನೀಡಲು ಶಿಕ್ಷಕರ ಪ್ರತ್ಯಕ್ಷ ಉಪಸ್ಥಿತಿ ಅತ್ಯಗತ್ಯ ಎಂದರು.
ಇAದಿನ ಪೀಳಿಗೆಯ ಮಕ್ಕಳು ಅತ್ಯಂತ ತೀಕ್ಷ÷್ಣ ಬುದ್ಧಿವಂತಿಕೆ ಹೊಂದಿದ್ದು, ಕಠಿಣ ಪ್ರಶ್ನೆ ಕೇಳುತ್ತಾರೆ. ಇಂತಹ ತೀಕ್ಷ÷್ಣ ಬುದ್ಧಿಯ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರು ಸಹ ಪ್ರತಿದಿನ ಪೂರ್ವತಯಾರಿ ಹಾಗೂ ಹೋಂವರ್ಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಕೇವಲ ಪಠ್ಯಪುಸ್ತಕದ ಚೌಕಟ್ಟಿಗೆ ಸೀಮಿತವಾಗದೆ, ಮಕ್ಕಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಬೋಧನೆ ಮಾಡಬೇಕಾದ ಸವಾಲು ಇಂದು ಅಧ್ಯಾಪಕರ ಮೇಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಚೇತನ್ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಮತ್ತು ಆರ್ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬ ಮಾತುಗಳಿದ್ದವು. ಆದರೆ, ಚಂದ್ರಶೇಖರ್ ನುಗ್ಲಿ ಅವರ ಅಧ್ಯಕ್ಷತೆಯಲ್ಲಿ ಸಂಘವು ನಡೆಸಿದ ನಿರಂತರ ಪ್ರಯತ್ನದ ಫಲವಾಗಿ, ಇಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಿ ಮತ್ತು ಆರ್ ಸಮಸ್ಯೆಯನ್ನು ಯಶಸ್ವಿಯಾಗಿ ಬಗೆಹರಿಸಲಾಗಿದೆ ಎಂದು ಹೇಳಿದರು.
ಕೆಸಿಎಸ್ಆರ್ ನಿಯಮಾವಳಿಗಳಿಗೆ ಒಳಪಟ್ಟು ಸೇವೆ ಸಲ್ಲಿಸುವ ಸರ್ಕಾರಿ ನೌಕರರು, ತಮ್ಮ ಜೀವ ಮಾನವಿಡೀ ನಿರಂತರ ಹಾಜರಾತಿ, ಗಣತಿ ಹಾಗೂ ಶಿಕ್ಷಣ ಸೇವೆಯಲ್ಲಿ ತೊಡಗಿರುತ್ತಾರೆ. ೬೦ ವರ್ಷಗಳ ಸೇವೆಯ ನಂತರ ವಿಶ್ರಾಂತ ಜೀವನ ನಡೆಸಬೇಕಾದ ಸಮಯದಲ್ಲಿ 'ಪಿಂಚಣಿ ಇಲ್ಲ' ಎಂಬ ಪರಿಸ್ಥಿತಿ ಎದುರಾಗಿರುವುದು ದುರಂತ ಸಂಗತಿ. ಈ ಪಿಂಚಣಿ ರಹಿತ ವ್ಯವಸ್ಥೆಯು ಶಿಕ್ಷಕರ ಹಾಗೂ ನೌಕರರ ಸಂಧ್ಯಾಕಾಲದ ಬದುಕಿಗೆ ದೊಡ್ಡ ಸಮಸ್ಯೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪ್ರಸ್ತುತ ಸರ್ಕಾರದ ಎರಡು ವರ್ಷಗಳ ಅವಧಿಯಲ್ಲಿ ಎನ್ಪಿಎಸ್ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಬದ್ಧತೆಯಿಂದ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು. ಮಡಿಕೇರಿ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಮಾತನಾಡಿ, ಸರಿಯಾದ ದಾರಿ ತೋರಿಸುವ ಶಿಕ್ಷಕರ ತ್ಯಾಗ, ಪರಿಶ್ರಮ ಮತ್ತು ಪ್ರೀತಿಗೆ ನಾವೆಲ್ಲರೂ ಗೌರವ ಸಲ್ಲಿಸಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಂಡ್ರAಗಿ ನಾಗರಾಜ, ಕೊಡಗು ಜಿಲ್ಲಾ ಪ್ರೌಢಶಾಲಾ ಉಪ ಪ್ರಾಂಶುಪಾಲರ ಮತ್ತು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾರಿ ಮೋರಸ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಜಿ.ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹೇAದ್ರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಸನ್ನ ಕುಮಾರ್, ಪ್ರಮುಖ ಹೆಚ್.ಕೆ.ಕುಮಾರ್, ಪಿ.ಎ.ಪ್ರವೀಣ್, ಎ.ಪಿ.ಸೋಮಯ್ಯ, ಕೋಟ್ರಂಗಡ ತಿಮ್ಮಯ್ಯ, ಜಿ.ಸಿ.ಶರತ್ ಕುಮಾರ್, ಕೆ.ಸ್ವರ್ಣಲತಾ, ಮೋಹನ್ ಪೆರಾಜೆ, ಬಿ.ಎನ್.ಜಯಂತಿ, ಕೆ.ಎಂ.ಶರತ್, ವಿವಿಧ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.
ಶಿಕ್ಷಕರ ಲಹರಿ ತಂಡದವರು ವಂದೇ ಮಾತರಂ, ನಾಡಗೀತೆ ಮತ್ತು ರೈತ ಗೀತೆ ಹಾಡಿದರು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಹೇಶ್ ಆರ್.ಪಿ. ಸ್ವಾಗತಿಸಿದರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಎಸ್.ಪ್ರಸನ್ನ ಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಪಡೆದ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಅಭಿನಂದಿಸಲಾಯಿತು. ನಿವೃತ್ತ ಹಿರಿಯ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಲಾಯಿತು.