*ಗೋಣಿಕೊಪ್ಪ, ಸೆ. ೫: ಮೀನುಗಳಿಗೆ ಆಹಾರ ಹಾಕಲು ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಟಿ. ಶೆಟ್ಟಿಗೇರಿ, ತಾವಳಗೇರಿ ಗ್ರಾಮದ ನಿವಾಸಿ ಮಚ್ಚಮಾಡ ನಾಣಯ್ಯ (ಮರಿ) ಅವರ ಪತ್ನಿ ಹೇಮಾವತಿ (೪೦) ಮೃತಪಟ್ಟ ದುರ್ದೈವಿ.
ನಾಣಯ್ಯ ಅವರು ತಮ್ಮ ತೋಟದ ಕೆರೆಯಲ್ಲಿ ಮೀನು ಸಾಕಣೆ ನಡೆಸುತ್ತಿದ್ದು, ಎಂದಿನAತೆ ಶನಿವಾರ ಬೆಳಗ್ಗೆ ಹೇಮಾವತಿ ಅವರು ಮೀನುಗಳಿಗೆ ಆಹಾರ ಹಾಕಲು ಕೆರೆ ಬಳಿ ತೆರಳಿದ್ದರು. ಕೆರೆ ಇಳಿಜಾರು ಇದ್ದ ಕಾರಣ ಕಾಲುಜಾರಿ ಕೆರೆಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಘಟನೆ ತಿಳಿದು ಸ್ಥಳೀಯರು ಕೆರೆ ಬಳಿ ಧಾವಿಸಿ, ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹೇಮಾವತಿ ಅವರು ಟಿ.ಶೆಟ್ಟಿಗೇರಿ ಗ್ರಾ.ಪಂ. ಮಾಜಿ ಸದಸ್ಯೆಯಾಗಿದ್ದು, ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.