ಶನಿವಾರಸಂತೆ, ಸೆ. ೫: ಗೌರಿ-ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಆಚರಿಸುವ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸಲಹಾ ಸಭೆ ನಡೆಯಿತು. ಶನಿವಾರಸಂತೆ ಪೊಲೀಸ್ ಠಾಣೆ ಹಾಗೂ ಕೊಡ್ಲಿಪೇಟೆ ಉಪ ಪೊಲೀಸ್ ಠಾಣಾ ವ್ಯಾಪ್ತಿಯ ೪೫ ಗಣೇಶೋತ್ಸವ ಸೇವಾ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೃತ್ತ ನಿರೀಕ್ಷಕ ಜಿ. ಕೃಷ್ಣರಾಜ್ ಮಾತನಾಡಿ, ಗಣೇಶೋತ್ಸವದ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮಗಳನ್ನು ಶಾಂತಿಯುತವಾಗಿ ನಡೆಸಬೇಕು. ಸಾರ್ವಜನಿಕ ಆಚರಣೆಯ ಸಂದರ್ಭದಲ್ಲಿ ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಚಂದಾ ವಸೂಲಿ ಮಾಡುವ ಸಂದರ್ಭ ಯಾವುದೇ ರೀತಿಯ ಬಲವಂತ ಮಾಡಬಾರದು. ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಬ್ದಮಾಲಿನ್ಯ ನಿಯಂತ್ರಣಕ್ಕೆ ಸಂಬAಧಿಸಿದ ಸುತ್ತೋಲೆಯನ್ನು ಅನುಸರಿಸಬೇಕು. ರಾತ್ರಿ ೧೦ರಿಂದ ಬೆಳಿಗ್ಗೆ ೬ ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು.

ಪಟಾಕಿ ಸಿಡಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಗಣೇಶೋತ್ಸವದ ಅಂಗವಾಗಿ ಆಯೋಜಿಸುವ ಕಾರ್ಯಕ್ರಮಗಳ ವಿವರವನ್ನು ಮುಂಚಿತವಾಗಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಎಲ್ಲರ ಸಹಕಾರದಿಂದ ಈ ವರ್ಷದ ಗಣೇಶೋತ್ಸವವು ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.

ಸಭೆಯಲ್ಲಿ ಪಿಎಸ್‌ಐ ಎಚ್.ವೈ. ಚಂದ್ರ, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧೆಡೆಯ ಗಣೇಶೋತ್ಸವ ಸೇವಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.