ಸುಂಟಿಕೊಪ್ಪ, ಸೆ. ೫: ಜಾತಿ, ಧರ್ಮ ಹಾಗೂ ರಾಜಕೀಯ ರಹಿತವಾಗಿ ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸುವ ಉದ್ದೇಶದಿಂದ ನೂತನವಾಗಿ ರಚಿಸಲಾಗಿರುವ ವೇವ್ ಸಂಘಟನೆಯ ಅಧಿಕೃತ ಉದ್ಘಾಟನೆ ಸುಂಟಿಕೊಪ್ಪದಲ್ಲಿ ನಡೆಯಿತು.
ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್ ಅವರು ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದರು.
ಸುಂಟಿಕೊಪ್ಪದ ನೆಲದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಕೊರೊನಾ ಮಹಾಮಾರಿ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ, ತಮ್ಮ ಜೀವದ ಹಂಗು ತೊರೆದು ೩೦೦ರಿಂದ ೪೦೦ ಕುಟುಂಬಗಳಿಗೆ ನೆರವಾದ ಯುವಕರ ತಂಡ ಇದೀಗ ‘ವೇವ್’ ಎಂಬ ಅಧಿಕೃತ ಸಂಘಟನೆಯ ರೂಪ ಪಡೆದುಕೊಂಡಿದೆ. ಕಡಲಿನ ಅಲೆಯಂತೆ ಈ ಬಳಗದ ನಿಸ್ವಾರ್ಥ ಸೇವೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.
ಸಂಘಟನೆಯ ಸಂಚಾಲಕರಾಗಿ ಕೆ.ಎ. ಲತೀಫ್ ಹಾಗೂ ವಕೀಲ ಫರಾಝ್ ಉಸ್ಮಾನ್ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಕೋಶಾಧಿಕಾರಿ ಕೆ.ಎಸ್. ಅನಿಲ್ ಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ, ಸಂಸ್ಥೆಯ ನಿರ್ದೇಶಕರಾದ ಶರೀಫ್ ಎ., ಮುದಸ್ಸಿರ್, ಫಿರೋಜ್ ಖಾನ್ ಸೇರಿದಂತೆ ಸಂಘಟನೆಯ ನೂರಾರು ಸದಸ್ಯರು ಪಾಲ್ಗೊಂಡಿದ್ದರು.