ಮಡಿಕೇರಿ, ಸೆ. ೪: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ತಾ. ೫ ರಂದು (ಇಂದು) ಬೆಳಿಗ್ಗೆ ೧೦.೩೦ ಗಂಟೆಗೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಡಿಕೇರಿ ತಾಲ್ಲೂಕು ಮಟ್ಟದ ಪ್ರಜಾ ಸೇವಾ ಅಭಿಯಾನಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ. ನರೇಂದ್ರ ಸ್ವಾಮಿ ಅವರು ಚಾಲನೆ ನೀಡಲಿದ್ದಾರೆ.

ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಇತರರು ಪಾಲ್ಗೊಳ್ಳಲಿದ್ದಾರೆ.

ಈ ಸಂಬAಧ ಡಾ. ಬಿ.ಆರ್. ಅಂಬೇಡ್ಕರ್ ಭವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಶುಕ್ರವಾರ ಸಿದ್ಧತೆ ಸಂಬAಧ ಭೇಟಿ ನೀಡಿ ಪರಿಶೀಲಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ, ಸಮಗ್ರ ಗಿರಿಜನ ಕಲ್ಯಾಣ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಯ ‘ಮಾಹಿತಿ ಮಳಿಗೆ’ ನಿರ್ಮಾಣ, ಸೇರಿದಂತೆ ಸಾರ್ವಜನಿಕರು ಕುಂದುಕೊರತೆ ಮನವಿ ಸಲ್ಲಿಕೆಗೆ ನೋಂದಣಿಗೆ ಅವಕಾಶ ಮತ್ತಿತರ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.

ಪ್ರಜಾಸೇವಾ ಆಂದೋಲನ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಇದೊಂದು ವೇದಿಕೆಯಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಕೋರಿದರು.

ಯಾವುದೇ ರೀತಿಯ ಕುಂದುಕೊರತೆಗಳ ಬಗ್ಗೆ ಸರ್ಕಾರದ ಬಳಿ ಹೇಳಿಕೊಳ್ಳಬಹುದು. ಕರ್ನಾಟಕ ಸರ್ಕಾರದ ಪ್ರಜಾಸೇವಾ ಅಭಿಯಾನ ಎನ್ನುವುದು ಸಾರ್ವಜನಿಕರ ಕುಂದುಕೊರತೆಯನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಅಥವಾ ನಿರ್ದಿಷ್ಟ ಅವಧಿಯಲ್ಲಿ ಪರಿಹಾರ ಒದಗಿಸುವ ಏಕೀಕೃತ ವ್ಯವಸ್ಥೆಯಾಗಲಿದೆ.

ವಿವಿಧ ಇಲಾಖೆಗಳಿಗೆ ಸಂಬAಧಿಸಿದ ದೂರುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು. ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹೆಚ್ಚಿಸುವುದು ಪ್ರಜಾಸೇವಾ ಅಭಿಯಾನದ ಉದ್ದೇಶವಾಗಿದೆ ಎಂದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಸಾರ್ವಜನಿಕರ ಹತ್ತಿರ ಇಡೀ ಆಡಳಿತ ಯಂತ್ರ ವಿಕೇಂದ್ರೀಕರಿಸಿ, ಪ್ರಜಾಪ್ರಭುತ್ವವನ್ನು ಸಂವಿಧಾನದ ಆಶಯದಂತೆ ಕೊಂಡೊಯ್ಯುವುದು ಆಶಯವಾಗಿದೆ. ಪ್ರಜಾಸೇವಾ ಅಭಿಯಾನ ಮೂಲಕ ಅಹವಾಲುಗಳನ್ನು ನೇರವಾಗಿ ಆಲಿಸುವುದರ ಜೊತೆಗೆ, ಅರ್ಜಿಗಳ ತ್ವರಿತ ವಿಲೇವಾರಿ, ಸ್ಥಳದಲ್ಲಿಯೇ ಸೇವೆ ಒದಗಿಸುವಿಕೆ, ಅಹವಾಲುಗಳ ನಿರಂತರ ಪರಿಶೀಲನೆ, ಅಧಿಕಾರಿಗಳ ಹೊಣೆಗಾರಿಕೆ ಮತ್ತು ನಾಗರಿಕರಿಗೆ ಪಾರದರ್ಶಕ ವರದಿ ನೀಡುವ ವ್ಯವಸ್ಥೆಯನ್ನು ಖಚಿತಪಡಿಸುವುದಾಗಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ರೂಪಿಸಿರುವ ಸರ್ಕಾರದ ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾರ್ವಜನಿಕರು ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಲು ಈ ವೇದಿಕೆಯ ಸದುಪಯೋಗ ಪಡೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.