ವರದಿ : ಈಶಾನ್ವಿ

ವೀರಾಜಪೇಟೆ, ಸೆ. ೪: ವಿರಾಜಪೇಟೆ ತಾಲೂಕಿನ ಪೆರುಂಬಾಡಿ ತಪಾಸಣಾ ಗೇಟ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವಸೂಲಾತಿ, ರೋಲ್ ಕಾಲ್, ಹಫ್ತಾ ದಂಧೆ, ಗೂಂಡಾಗಿರಿ ಹಾಗೂ ನೈತಿಕ ಪೊಲೀಸ್‌ಗಿರಿ ಕೃತ್ಯಗಳನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ ವೀರಾಜಪೇಟೆ ಮಂಡಲದ ವತಿಯಿಂದ ‘ಪೆರುಂಬಾಡಿ ಚಲೋ’ ಹಾಗೂ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.

ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ವೀರಾಜಪೇಟೆ-ಮಾಕುಟ್ಟ ಅಂತರರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ತಡೆಯಿಂದಾಗಿ ಮಾರ್ಗದ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತು, ಸಾರ್ವಜನಿಕರು ಹಾಗೂ ವಾಹನ ಚಾಲಕರು ಸುಡುಬಿಸಿಲಿನಲ್ಲಿ ಗಂಟೆಗಟ್ಟಲೆ ಪರದಾಡುವಂತಾಯಿತು. ಪ್ರತಿಭಟನಾಕಾರರು ತುರ್ತು ಸೇವೆಗೆ ತೆರಳುತ್ತಿದ್ದ ವಾಹನಗಳನ್ನು ಮಾನವೀಯತೆಯ ಆಧಾರದ ಮೇಲೆ ಬಿಟ್ಟು ಕಳುಹಿಸಿದರು.

ನೈತಿಕ ಪೋಲಿಸ್‌ಗಿರಿ ಕೃತ್ಯವನ್ನು ಖಂಡಿಸಿ ಮಾತನಾಡಿದ ಬಿಜೆಪಿ ವೀರಾಜಪೇಟೆ ಮಂಡಲ ಅಧ್ಯಕ್ಷ ಸುವಿನ್ ಗಣಪತಿ, ರಾತ್ರಿ ವೇಳೆ ಕೇರಳ ಕಡೆಗೆ ತೆರಳುವ ಸರಕು ಸಾಗಣೆ ವಾಹನಗಳನ್ನು ಅಡ್ಡಗಟ್ಟಿ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಹಚರರು ಹಾಗೂ ಇಬ್ಬರು ಸಿವಿಲ್ ಉಡುಪಿನ ವ್ಯಕ್ತಿಗಳು ವೀರಾಜಪೇಟೆ ನಗರ ಠಾಣಾ ಸಬ್ ಇನ್‌ಸ್ಪೆಕ್ಟರ್ ಅವರ ಸಮ್ಮುಖದಲ್ಲೇ ಅಕ್ರಮವಾಗಿ ಹಣ ವಸೂಲಿ ಮಾಡಿದ್ದಾರೆ. ಇದರ ವೀಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದೆ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಬೆಂಬಲಕ್ಕಿದ್ದಾರೆ ಎಂಬ ದಾಷ್ಟ÷್ರ್ಯದಲ್ಲಿ ಗೂಂಡಾಗಿರಿ ನಡೆಸಲಾಗುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆಯೂ ಶಾಮೀಲಾಗಿರುವ ಶಂಕೆಯಿದೆ. ತಪ್ಪಿತಸ್ಥರ ವಿರುದ್ಧ ತಕ್ಷಣವೇ ಸುಮೋಟೋ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಬೇಕು. ಸರಕಾರದ ಕೃಪಾಕಟಾಕ್ಷದಿಂದ ನಡೆಯುತ್ತಿರುವ ಈ ಕೋಟ್ಯಾಂತರ ರೂಪಾಯಿ ದಂಧೆಯ ನಿಜಾಂಶ ಹೊರಬರಲು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಈ ಗೇಟ್‌ನಲ್ಲಿ ದಿನಕ್ಕೆ ಸುಮಾರು ೬ ಲಕ್ಷಕ್ಕೂ ಹೆಚ್ಚು ಹಾಗೂ ವರ್ಷಕ್ಕೆ ಕೋಟ್ಯಂತರ ರೂಪಾಯಿಗಳ ಅಕ್ರಮ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ದಂಧೆಕೋರನೇ ಹೇಳಿರುವಂತೆ, ಚೆತ್ತುಕಲ್ಲು ಸಾಗಿಸುವ ಲಾರಿಯಿಂದ ೩,೫೦೦, ಹುಲ್ಲು ಲಾರಿಯಿಂದ ೫೦೦ ಹಾಗೂ ಕಲ್ಲು ಸಾಗಿಸುವ ಲಾರಿ ಅಥವಾ ಇತರ ವಾಹನಗಳಿಂದ ೫೦ ರಿಂದ ೧೦೦ ರವರೆಗೆ ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ಈ ಹಣ ಎಲ್ಲಿ ಹೋಯಿತು? ಅಧಿಕಾರಿಗಳ ಮುಂದೆ ರೋಲ್‌ಕಾಲ್ ಮಾಡ್ತಾ ಇದ್ದಾನೆ, ಪರಿಶೀಲನೆ ಅನ್ನೋದು ಅವಶ್ಯಕತೆ ಇಲ್ಲ. ಪೊಲೀಸ್ ಅಧಿಕಾರಿಗಳ ಮುಂದೆ ಹಫ್ತಾ ವಸೂಲಿ ಮಾಡಿರುವುದಕ್ಕೆ ಸಾಕ್ಷಿ ಇರುವುದರಿಂದ ನೀವು ಸುಮೋಟೋ ಮಾಡಬೇಕು. ಹಿಂದೂ ಕಾರ್ಯಕರ್ತರು ಗೋ ಸಾಗಾಟ ಮಾಡುವವರನ್ನು ಹಿಡಿದು ಗೋ ರಕ್ಷಿಸಿದರೆ ಅವರ ಮೇಲೆ ರೌಡಿ ಶೀಟ್ ಹಾಕ್ತೀರಾ, ಗಡಿಪಾರು ಮಾಡಿಸ್ತೀರಾ. ವೀಡಿಯೋ ಸಾಕ್ಷಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ರೂ ಇವರ ಮೇಲೆ ಯಾಕೆ ಆಕ್ಷನ್ ತಗೋಳೋಕೆ ಆಗಲ್ಲ, ಎಸ್.ಐ ಮುಂದೆ ಅವನು ದಬ್ಬಾಳಿಕೆ ಮಾಡಿ ದುಡ್ಡು ತಗೊಂಡು ಎಸೆಯುತ್ತಾನೆ. ಆಗಲೇ ಅವನನ್ನು ಅರೆಸ್ಟ್ ಮಾಡಬಹುದಿತ್ತು. ಯಾಕೆ ಮೂರು ಪೊಲೀಸರನ್ನ ಬಲಿ ಕೊಟ್ಟಿದ್ದೀರಾ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರ ಅಮಾನತು ರದ್ದುಗೊಳಿಸಿ

ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಂಬAತೆ ಅಮಾಯಕ ಪೊಲೀಸರನ್ನು ಯಾಕೆ ಅಮಾನತು ಮಾಡಿದ್ದೀರಿ? ಎಂದು ಶಾಂತೆಯAಡ ರವಿ ಕುಶಾಲಪ್ಪ ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ವೀರಾಜಪೇಟೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎಸ್.ಐ ಅವರನ್ನು ಮುಂದೆ ನಿಲ್ಲಿಸಿಕೊಂಡು, ನೇರವಾಗಿ ಬರುವ ಗಾಡಿಗಳನ್ನು ನಿಲ್ಲಿಸಿ ಹಣ ವಸೂಲಿ ಮಾಡಿ ಮೇಜಿನ ಮೇಲೆ ತಂದು ಬಿಸಾಡುತ್ತಾರೆ. ನಮ್ಮ ಭಾರತದ ಸಂವಿಧಾನದಲ್ಲಿ ಕರೆನ್ಸಿಯನ್ನು ಈ ರೀತಿ ಬಿಸಾಡುವುದಕ್ಕೆ ಅಥವಾ ಖಾಸಗಿ ವ್ಯಕ್ತಿ ಎಸ್.ಐ ಮುಂದೆ ಹಣ ವಸೂಲಿ ಮಾಡುವುದಕ್ಕೆ ಅಧಿಕಾರ ಇದೆಯಾ, ಅವರೇ ಮಾತನಾಡುತ್ತಾ ‘ಜಲ್ಲಿಕಲ್ಲು ಲಾರಿಗೆ, ೩,೫೦೦, ಹುಲ್ಲು ಲಾರಿಗೆ ೫೦೦, ಇತರ ವಾಹನಗಳಿಗೆ ೫೦ ರಿಂದ ೨೦೦ ವಸೂಲಿ ಮಾಡ್ತೀವಿ‘ ಅಂತ ಒಪ್ಪಿಕೊಂಡಿದ್ದಾರೆ. ದಿನಕ್ಕೆ ಲಕ್ಷಾಂತರ ರೂ. ಆದರೆ ವರ್ಷಕ್ಕೆ ಕೋಟ್ಯಾಂತರ ರೂ. ದಂಧೆ ಇದಾಗಿದೆ. ಎಸ್.ಐ ಮುಂದೆ ಹೀಗೆ ಕಲೆಕ್ಷನ್ ಆಗೋದಾದ್ರೆ ಇದಕ್ಕೆ ಮೇಲಿಂದ ಯಾರ ಮಾರ್ಗದರ್ಶನ ಇದೆ, ಸರಕಾರ ಇದೆಯಾ, ಶಾಸಕರ ಕುಮ್ಮಕ್ಕಿದೆಯಾ, ಗೃಹಮಂತ್ರಿಗಳು ಅಥವಾ ರಾಜ್ಯ ಸರ್ಕಾರದಿಂದ ನಿರ್ದೇಶನವಿದೆಯಾ, ಕಳ್ಳನಿಗೆ ರಕ್ಷಣೆ, ಪೊಲೀಸರಿಗೆ ಶಿಕ್ಷೆ ಕೊಡ್ತಿದ್ದೀರಾ. ಹಿಂದೆ ಉತ್ತರ ಪ್ರದೇಶ, ಬಿಹಾರದಲ್ಲಿ ನಡೀತಿದ್ದ ದಾದಾಗಿರಿ ಈಗ ಕೊಡಗಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ “ಕೇರಳದಲ್ಲಿ ೩೦ ಇರುವ ಚೆತ್ ಕಲ್ಲು (ಇಟ್ಟಿಗೆ), ಟ್ರಾನ್ಸ್ಪೋರ್ಟೇಶನ್ ೨೦ ಸೇರಿ ೫೦ ಆಗುತ್ತದೆ. ಆದರೆ ಕೊಡಗಿನಲ್ಲಿ ಗ್ರಾಹಕರಿಗೆ ತಲುಪುವಾಗ ಅದು ೬೨ ಆಗ್ತದೆ. ಈ ವ್ಯತ್ಯಾಸದ ೧೨ ಹಣವನ್ನು ಪೊಲೀಸ್, ಆರ್.ಟಿ.ಓ (ಖಖಿಔ) ಹಾಗೂ ಮೈನ್ಸ್ ಅಂಡ್ ಜಿಯಾಲಜಿ ಅವರಿಗೆ ಕೊಡ್ತೀವಿ ಎಂದು ಬಹಿರಂಗವಾಗಿ ಹೇಳಿದ್ದಾನೆ. ಈ ಮಧ್ಯವರ್ತಿಗಳ ದಂಧೆ ಇವತ್ತಿಗೆ ನಿಲ್ಲಬೇಕು. ಗ್ರಾಹಕರಿಗೆ ೫೫ ರೊಳಗೆ ಸಿಗುವಂತಾಗಬೇಕು. ನೂರಾರು ಲಾರಿಗಳು ಯಾವುದೇ ಪರ್ಮಿಟ್ ಇಲ್ಲದೆ, ಗಣಿ ಇಲಾಖೆಯ ಅನುಮತಿಯಿಲ್ಲದೆ ಓಡಾಡ್ತಿವೆ. ಪಿ.ಡಬ್ಲೂ÷್ಯ.ಡಿ ರಸ್ತೆಗಳು ಹಾಳಾಗ್ತಿವೆ. ತಾಲೂಕುಮಟ್ಟದ ಗಣಿ ಅಧಿಕಾರಿಗಳು ಪಾಪದ ಸಾಮಾನ್ಯ ಜನರು ೫ ಸೆಂಟ್ ಮನೆ ಕಟ್ಟೋ ಕನ್ವರ್ಷನ್‌ಗೆ ಬಂದರೆ ಅಲೆದಾಡಿಸ್ತೀರಾ, ಆದರೆ ಈ ೨೦೦ ಲಾರಿಗಳು ಅಕ್ರಮವಾಗಿ ಓಡಾಡ್ತಿದ್ರೂ ಎಷ್ಟು ಕೇಸ್ ಹಾಕಿದ್ದೀರಾ, ಜಿ.ಪಿ.ಎಸ್ ಚೆಕ್ ಮಾಡಿದ್ದೀರಾ ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿದ್ದ ವೀರಾಜಪೇಟೆ ತಾಲೂಕು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾದ ವಿದ್ಯಾ ಮತ್ತು ಸುಭಾಶ್‌ಚಂದ್ರ ಅವರು ಸಮರ್ಪಕವಾಗಿ ಉತ್ತರ ನೀಡಲು ಸಾಧ್ಯವಾಗದೆ ಸುಮ್ಮನಿರುವಂತಾಯಿತು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕಿಲನ್ ಗಣಪತಿ ಮಾತನಾಡಿ ಆಡಳಿತ ಪಕ್ಷದ ಕೈಗೊಂಬೆಗಳAತೆ ಅಧಿಕಾರಿಗಳು ವರ್ತಿಸಬಾರದು, ತಪ್ಪಿತಸ್ಥರ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಂಡಿದ್ದೀರಾ ಎನ್ನುವುದನ್ನು ಬಹಿರಂಗಪಡಿಸಿ ಎಂದು ಒತ್ತಾಯಿಸಿದರು.

ಬಿಜೆಪಿಯ ಮಾಚಿಮಂಡ ರವೀಂದ್ರ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಎಲ್ಲೂ ಹಣ ಕೊಡಬೇಡಿ, ಹಣ ತಗೊಂಡ್ರೆ ನನಗೆ ಫೋನ್ ಮಾಡಿ’ ಅಂತಾರೆ. ಆದರೆ ಈ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು ಖುದ್ದಾಗಿ ಹಣ ವಸೂಲಿ ಮಾಡೋ ವೀಡಿಯೋ ಸಾರ್ವಜನಿಕವಾಗಿ ಕಾಣಿಸ್ತಿದೆ. ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳಲೇಬೇಕು. ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆ ಮಾಡಿದ್ದ ಹಿನ್ನಲೆ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತದೆ ಎಂದು ಪೋಲಿಸ್ ವೃತ್ತ ನಿರೀಕ್ಷರಾದ ಅನೂಪ್ ಮಾದಪ್ಪ ಅವರು ಪ್ರತಿಭಟನಾಕಾರರ ಮನವೊಲಿಸಿದರು. ಈ ವೇಳೆ ಪ್ರತಿಭಟನಾಕಾರರು, ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲಿಸಿ ಬಂಧಿಸಲೇಬೇಕು, ಅವರ ಮೇಲೆ ಯಾವ ರೀತಿಯ ಕಾನೂನು ಕ್ರಮ ತೆಗೆದುಕೊಂಡಿದ್ದೀರಿ ಎಂದು ತಿಳಿಸಬೇಕು. ಇಲ್ಲದಿದ್ದಲ್ಲಿ ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈ ಬಿಡುವುದಿಲ್ಲ. ಎಸ್‌ಪಿ ಅವರು ಸ್ಥಳಕ್ಕೆ ಆಗಮಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದರು.

ಪ್ರತಿಭಟನಾಕಾರರ ಒತ್ತಡಕ್ಕೆ ಅಧಿಕಾರಿಗಳು ಮಣಿದು ಸ್ಥಳಕ್ಕೆ ಆಗಮಿಸಿದ್ದ, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು, ವೀಡಿಯೋ ನೋಡಿ ಮಡಿಕೇರಿ ಡಿ.ವೈ.ಎಸ್.ಪಿ ಅವರು ನೀಡಿದ ತನಿಖಾ ವರದಿಯ ಆಧಾರದ ಮೇಲೆಯೇ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ. ನೈತಿಕ ಪೊಲೀಸ್‌ಗಿರಿ ಹಾಗೂ ಅಕ್ರಮ ವಸೂಲಿ ವಿಚಾರವಾಗಿ ಮುಂದಿನ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಚೆತ್ತುಕಲ್ಲು ಸಾಗಾಟಕ್ಕೆ ಸಂಬAಧಿಸಿದAತೆ ಪ್ರತಿಭಟನಾಕಾರರು ಆರ್‌ಟಿಓ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮೋಟಾರ್ ವೆಹಿಕಲ್ ಇನ್ಸೆ÷್ಪಕ್ಟರ್ ಪ್ರದೀಪ್ ಮಾತನಾಡಿ “ಕೋಸ್ಟಲ್/ಅಂತರರಾಜ್ಯ ರೀಜನ್‌ನಲ್ಲಿ ಕ್ಲಿಯರೆನ್ಸ್ ಪ್ರಾವಿಷನ್ ಇದ್ದು, ಕೇರಳದಿಂದ ಪರ್ಮಿಟ್ ತಂದರೆ ಬಿಡಲು ಅವಕಾಶವಿದೆ ಎಂದು ಹೇಳಿದರು.

ಬಿಜೆಪಿ ಪ್ರಮುಖರಾದ ಯಮುನಾ ಚಂಗಪ್ಪ, ಪಟ್ಟಡ ರೀನಾ ಪ್ರಕಾಶ್, ಕುಟ್ಟಂಡ ಅಜಿತ್ ಕರುಂಬಯ್ಯ ಸೇರಿದಂತೆ ಇತರರು ಮಾತನಾಡಿದರು.

ಕೂಡಲೇ ನೈತಿಕ ಪೊಲೀಸ್‌ಗಿರಿ ಮಾಡಿದ ಮೂವರು ವ್ಯಕ್ತಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಬೇಕು, ಅಮಾನತ್ತು ಮಾಡಿರುವ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯುಕ್ತಿಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಚ್ಚಪಂಡ ಮಹೇಶ್ ಗಣಪತಿ, ಮೂಕೊಂಡ ಶಶಿ ಸುಬ್ರಮಣಿ, ಪಟ್ರಪಂಡ ರಘು ನಾಣಯ್ಯ, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಪರಮೇಶ್ವರ, ಕನ್ನಂಡ ಸಂಪತ್, ಬಿ.ಎಂ. ಗಣೇಶ್ ಸೇರಿದಂತೆ ಬಿಜೆಪಿ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಿದ್ದರು. ಪೆರುಂಬಾಡಿ ಚೆಕ್‌ಪೋಸ್ಟ್ನಲ್ಲಿ ಖಾಕಿ ಪಡೆಯ ಸರ್ಪಗಾವಲಿತ್ತು. ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.