ಸೋಮವಾರಪೇಟೆ, ಸೆ. ೨: ಎಸ್.ಸಿ. ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಪಕ್ಷದ ವರಿಷ್ಠರನ್ನು ಆಗ್ರಹಿಸಲು ಸೋಮವಾರಪೇಟೆಯಲ್ಲಿ ನಡೆದ ಎಸ್.ಸಿ. ಸಮುದಾಯದ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಎಸ್‌ಸಿ ಮತ್ತು ಎಸ್‌ಟಿ ಕಾರ್ಯಕರ್ತರು ಹಾಗೂ ಮುಖಂಡರುಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.
ಈ ಬಾರಿ ಕಾಂಗ್ರೆಸ್ ಪಕ್ಷದ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಂದರ್ಭ ಎಸ್‌ಸಿ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮುಖಂಡರು ಅಭಿಪ್ರಾಯಿಸಿದರು. ಸಭೆಯ ಮೊದಲಿಗೆ ಮಾತನಾಡಿದ ಸುಜಿತ್, ಈ ಬಾರಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಎಸ್‌ಸಿ ಸಮುದಾಯದವರನ್ನೇ ಆಯ್ಕೆ ಮಾಡಬೇಕು. ಅಲ್ಲದೆ ಬೂತ್ ಮಟ್ಟದಿಂದ ಜಿಲ್ಲೆಯ ಅಧ್ಯಕ್ಷರ ಸ್ಥಾನದವರೆಗೂ ದಲಿತ ಸಮುದಾಯದವರಿಗೆ ಸಮಾನ ಸ್ಥಾನಮಾನಗಳನ್ನು ನೀಡಬೇಕು. ಯುವಕರನ್ನು ಸದೃಢರನ್ನಾಗಿ ಮಾಡಲು ನಮಗೆ ಸರಿಯಾದ ಸ್ಥಾನಮಾನ ನೀಡುವುದು ಅಗತ್ಯ ಎಂದು ಹೇಳಿದರು.
ನಂತರ ಮಾತನಾಡಿದ ಟಿ.ಇ. ಸುರೇಶ್, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೪೫ ಸಾವಿರಕ್ಕೂ ಹೆಚ್ಚು ಎಸ್‌ಸಿ ಮತಗಳಿದ್ದು ಶೇಕಡ ೯೦ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರುತ್ತವೆ. ಹೀಗಿರುವಾಗ ದಲಿತ ಸಮುದಾಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕರುಗಳು ಹಾಗೂ ಜಿಲ್ಲೆಯ ಅಧ್ಯಕ್ಷರು ನಮಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದರು.
ಎಸ್‌ಸಿ ಘಟಕದ ಜಿಲ್ಲಾ ಅಧ್ಯಕ್ಷ ಬಿ.ಇ. ಜಯೇಂದ್ರ ಮಾತನಾಡಿ, ಈ ಬಾರಿ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಎಸ್ ಸಿ ಸಮುದಾಯದವರಿಗೆ ನೀಡುವುದಾಗಿ ಪಕ್ಷದ ಪ್ರಮುಖ ಮುಖಂಡರುಗಳು ತಿಳಿಸಿದ್ದಾರೆ. ಇದರೊಂದಿಗೆ ಇನ್ನೂ ವಿವಿಧ ಅನುಷ್ಠಾನ ಸಮಿತಿಗಳಿಗೆ ಎಸ್.ಸಿ. ಸಮುದಾಯದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಪಕ್ಷದ ಮುಖಂಡರುಗಳಲ್ಲಿ ಒತ್ತಾಯಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಪಕ್ಷದ ಮುಖಂಡರಾದ ಮೋಹನ್ ಮೌರ್ಯ, ಮಹೇಶ್, ವೇದ ಕುಮಾರ್, ಮಂಜುನಾಥ್, ರಾಜಪ್ಪ ಸೇರಿದಂತೆ ಇತರ ಕಾರ್ಯಕರ್ತರುಗಳು ಭಾಗಿಯಾಗಿದ್ದರು.