ನಾಪೋಕ್ಲು, ಸೆ. ೨: ಕೊಡವ ಜನಾಂಗ ಹಾಗೂ ಕೊಡವ ಭಾಷಿಕ ಜನಾಂಗ ಜಿಲ್ಲೆಯಲ್ಲಿ ಆಚರಿಸುವ ಹಬ್ಬ-ಹರಿದಿನಗಳಿಗೆ ವಿಶೇಷ ಮಹತ್ವವಿದೆ ಎಂದು ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ವ್ಯವಸ್ಥಾಪಕ ಚೋಕಿರ ಪೂವಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತ್ರವು ಯುವಕ ಸಂಘದ ವತಿಯಿಂದ ಭಾನುವಾರ ಬೇತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕೈಲ್ ಪೊಳ್ದ್ ಹಬ್ಬದ ಅಂಗವಾಗಿ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಕೈಲ್ ಪೊಳ್ದ್, ಕಾವೇರಿ ಸಂಕ್ರಮಣ ಹಾಗೂ ಹುತ್ತರಿ ಪ್ರಮುಖ ಹಬ್ಬಗಳಾಗಿವೆ. ಇದರೊಂದಿಗೆ ಪ್ರತಿಯೊಂದು ಗ್ರಾಮದಲ್ಲಿಯೂ ಅಲ್ಲಿನ ಜನಾಂಗದವರು ತಮ್ಮದೇ ಆದ ಸಂಪ್ರದಾಯದAತೆ ವಿವಿಧ ಹಬ್ಬಗಳನ್ನು ಆಚರಿಸುತ್ತಾರೆ. ಇಂತಹ ಹಬ್ಬ-ಹರಿದಿನಗಳು ಗ್ರಾಮಸ್ಥರಲ್ಲಿ ಸಾಮರಸ್ಯ ಮತ್ತು ಒಗ್ಗಟ್ಟನ್ನು ಬೆಸೆಯಲು ಕಾರಣವಾಗುತ್ತವೆ ಎಂದರು.
ಕೈಲ್ ಮುಹೂರ್ತ ಹಬ್ಬದ ಆಚರಣೆ ವೈವಿಧ್ಯಮಯವಾಗಿದ್ದು, ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ರೈತರು ದುಡಿಮೆಯ ಬಳಿಕ ಮನರಂಜನೆ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಈ ಹಬ್ಬ ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡ ಕಾಫಿ ಬೆಳೆಗಾರ ಚೋಕಿರ ಗಣೇಶ್ ಮಾತನಾಡಿ, ಕೈಲ್ ಪೊಳ್ದ್ ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಿ ಆಟೋಟಗಳ ಮೂಲಕ ಗ್ರಾಮೀಣ ಜನರ ನಡುವೆ ಸಾಮರಸ್ಯವನ್ನು ಬೆಸೆಯುವ ಹಬ್ಬವಾಗಿದೆ ಎಂದರು.
ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಕೀಕಂಡ ಸುಶೀಲ ಉಪಸ್ಥಿತರಿದ್ದರು.
ಹಬ್ಬದ ಅಂಗವಾಗಿ ಓಟದ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಒಡೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಭಾರದ ಕಲ್ಲು ಎಸೆತ, ಕಾಳು ಹೆಕ್ಕುವುದು, ನಿಂಬೆ-ಚಮಚ ಓಟ, ಹಗ್ಗಜಗ್ಗಾಟ ಸೇರಿದಂತೆ ಹತ್ತಾರು ಗ್ರಾಮೀಣ ಕ್ರೀಡಾಕೂಟಗಳು ನಡೆದವು. ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಸಂಭ್ರಮಿಸಿದರು.
ಕ್ರೀಡಾಕೂಟದ ಅಧ್ಯಕ್ಷತೆಯನ್ನು ಶ್ರೀ ಮಕ್ಕಿ ಶಾಸ್ತ್ರವು ಯುವಕ ಸಂಘದ ಅಧ್ಯಕ್ಷ ಕಾಳೆಯಂಡ ರಿನೇಶ್ ಪೊನ್ನಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಆಸ್ಮಾ ಮತ್ತು ದಿವ್ಯ ಪ್ರಾರ್ಥನೆ ನೆರವೇರಿಸಿದರು. ಚೋಕಿರ ರತಿಷ್ ತಿಮ್ಮಯ್ಯ ಸ್ವಾಗತಿಸಿದರು. ಕಾಳೆಯಂಡ ಜೀವನ್ ಬೋಪಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.