ಮಡಿಕೇರಿ, ಸೆ. ೨: ನಗರದ ರೋಟರಿ ವುಡ್ಸ್ ಸಂಸ್ಥೆ ವತಿಯಿಂದ ‘ನಮ್ಮ ಹಬ್ಬ-ನಮ್ಮ ಸೇವೆ’ ಯೋಜನೆಯ ಅಂಗವಾಗಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಡಿಕೇರಿ ನಗರ ಪೊಲೀಸ್ ಠಾಣೆ, ನಗರ ಮಹಿಳಾ ಪೊಲೀಸ್ ಠಾಣೆ ಹಾಗೂ ಮಡಿಕೇರಿ ಮಹಿಳಾ ಕಾಲೇಜಿನಲ್ಲಿ ರಕ್ಷಾ ಬಂಧನ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಯೋಜನೆಯ ಸಂಚಾಲಕ ಸಂಪತ್ ಕುಮಾರ್ ಎಸ್.ಎಸ್., ರಕ್ಷಾ ಸೂತ್ರವು ಕೇವಲ ಹಬ್ಬದ ದಿನ ಕೈಗೆ ಕಟ್ಟುವ ದಾರವಲ್ಲ. ಅದು ರಕ್ಷಣೆ, ನಂಬಿಕೆ ಮತ್ತು ಶುಭಾಶಯಗಳನ್ನು ಸಾರುವ ಪವಿತ್ರ ಸಂಕೇತವಾಗಿದೆ ಎಂದು ಹೇಳಿದರು.
ವೇದಕಾಲದಿಂದಲೂ ಯಜ್ಞ, ಪೂಜೆ ಹಾಗೂ ಶುಭ ಕಾರ್ಯಗಳ ಸಂದರ್ಭದಲ್ಲಿ ಪವಿತ್ರ ಮಂತ್ರಗಳಿAದ ಅಭಿಮಂತ್ರಿಸಿದ ರಕ್ಷಾ ಸೂತ್ರವನ್ನು ಕಟ್ಟುವ ಸಂಪ್ರದಾಯವಿದೆ. ಈ ಸೂತ್ರವು ದುಷ್ಟಶಕ್ತಿಗಳಿಂದ ರಕ್ಷಣೆ ನೀಡಿ, ಧೈರ್ಯ, ಶುಭ ಹಾಗೂ ದೈವಿಕ ಕೃಪೆಯನ್ನು ನೀಡುತ್ತದೆ ಎಂಬ ನಂಬಿಕೆ ಇದೆ. ಕಾಲಕ್ರಮೇಣ ಇದೇ ಸಂಪ್ರದಾಯ ಕುಟುಂಬಗಳಲ್ಲಿಯೂ ಬೆಳೆದು, ಪರಸ್ಪರರ ಒಳಿತು, ಕ್ಷೇಮ ಹಾಗೂ ಜವಾಬ್ದಾರಿಯನ್ನು ನೆನಪಿಸುವ ಪವಿತ್ರ ಬಂಧನವಾಗಿ ರೂಪುಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ ಹಾಗೂ ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ ಉಪಸ್ಥಿತರಿದ್ದು, ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನದ ಮಹತ್ವದ ಸಂದೇಶವನ್ನು ಸಾರಿದರು.