ಸುಂಟಿಕೊಪ್ಪ, ಸೆ. ೨: ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸುವುದರೊಂದಿಗೆ, ಅವರಿಗೆ ಸಂಕಷ್ಟಗಳು ಎದುರಾದಾಗ ಪುರುಷ ಸಮಾಜ ಬೆಂಬಲವಾಗಿ ನಿಂತು ಸಹೋದರಿಯರ ಸಮಸ್ಯೆಗಳನ್ನು ನಿವಾರಿಸಲು ಮುಂದಾದಾಗ ಮಾತ್ರ ರಕ್ಷಾಬಂಧನದ ಆಶಯ ಈಡೇರುತ್ತದೆ ಎಂದು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್ ಹೇಳಿದರು.

ಮಂಜುನಾಥಯ್ಯ-ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರು ಬಿಲ್ಲವ ಸೇವಾ ಸಂಘ, ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ವಿಚಾರದಲ್ಲೂ ಹಾಗೂ ಮಹಿಳೆಯರಿಗೆ ಸಮಸ್ಯೆಗಳು ಎದುರಾದಾಗ ಎಲ್ಲರೂ ಅದನ್ನು ತಮ್ಮ ಮನೆಯ ಸಹೋದರಿಯ ಸಮಸ್ಯೆ ಎಂದು ಭಾವಿಸಿ ಪರಿಹರಿಸಲು ಸಿದ್ಧರಾಗಬೇಕು. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ಸಹೋದರ ತನ್ನ ಸಹೋದರಿಯ ರಕ್ಷಣೆಗೆ ಬದ್ಧನಾದರೆ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದು ಹೇಳಿದರು.

ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮಣಿಮುಖೇಶ್ ಮಾತನಾಡಿ, ‘ಒಂದೇ ಕುಲ, ಮನುಜರೆಲ್ಲ ಒಂದೇ’ ಎಂಬ ತತ್ವವನ್ನು ಪ್ರತಿಪಾದಿಸಿದ ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮಕ್ಕೂ ಮುನ್ನ ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಸಮಿತಿಯ ಸದಸ್ಯರು ಪರಸ್ಪರ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಿ ಸಂಭ್ರಮಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ. ಮಣಿಮುಖೇಶ್ ವಹಿಸಿದ್ದರು. ಬಿಲ್ಲವ ಸಂಘದ ಸಲಹಾ ಸಮಿತಿ ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಪಿ. ಜಗನ್ನಾಥ್, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಪೂರ್ಣಿಮಾ ರವಿ, ಬಿ.ಎಂ. ಚಂದ್ರ, ಸುರೇಶ್ ಪೂಜಾರಿ ಕೊಡಗರಹಳ್ಳಿ, ಗೀತಾ ವಿಶ್ವನಾಥ್, ಕುಮಾರ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.