ಮಡಿಕೇರಿ, ಆ. ೩೧: ಶ್ರೀರಂಗಪಟ್ಟಣ ಬಳಿ ನಡೆದ ರಸ್ತೆ ಅವಘಡದಲ್ಲಿ ಜಿಲ್ಲೆಯ ಯುವಕ ದುರ್ಮರಣಗೊಂಡಿರುವ ಘಟನೆ ನಡೆದಿದೆ. ಮೂಲತಃ ಜಿಲ್ಲೆಯ ಕಾರುಗುಂದ ನಿವಾಸಿ ಬೊಳಂದAಡ ದಿ. ರವಿ ನಂಜಪ್ಪ ಹಾಗೂ ಮೀರಾ ದಂಪತಿಯ ಪುತ್ರ ರಕ್ಷಣ್ ಅಚ್ಚಯ್ಯ ಮೃತಪಟ್ಟಿರುವ ದುರ್ದೈವಿ.

ಇವರ ಕುಟುಂಬ ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದು, ರಕ್ಷಣ್ ಅಚ್ಚಯ್ಯ ಬೆಂಗಳೂರಿನಲ್ಲಿ ಕೆಫೆ ನಡೆಸುತ್ತಿದ್ದರು. ಕಳೆದ ರಾತ್ರಿ ದ್ವಿಚಕ್ರ ವಾಹನದಲ್ಲಿ ಸ್ನೇಹಿತನೊಂದಿಗೆ ಮೈಸೂರಿನ ಮನೆಗೆ ಆಗಮಿಸುತ್ತಿದ್ದಾಗ ಶ್ರೀರಂಗಪಟ್ಟಣ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿದೆ ಎನ್ನಲಾಗಿದೆ. ಈ ಸಂದರ್ಭ ರಕ್ಷಣ್ ಅಚ್ಚಯ್ಯ ಅವರ ತಲೆಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಸ್ಥಳೀಯರ ನೆರವಿನಿಂದ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅಂತ್ಯಕ್ರಿಯೆ ಮೈಸೂರಿನಲ್ಲೇ ನೆರವೇರಿದೆ. ಬೈಕ್‌ನಲ್ಲಿದ್ದ ಸ್ನೇಹಿತ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.