ವಿಶೇಷ ವರದಿ: ಚಂದ್ರಮೋಹನ್
ಕುಶಾಲನಗರ, ಆ.೩೦: ಕಾವೇರಿ ನದಿ ಪ್ರವಾಹದಿಂದ ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕುವ ಕುಶಾಲನಗರ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಂದಾಜು ೮೦೦ ಕೋಟಿ ವೆಚ್ಚದ ಸಮಗ್ರ ಪ್ರವಾಹ ನಿಯಂತ್ರಣ ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರದ ಬಳಿಯಿಂದ ಗುಮ್ಮನಕೊಲ್ಲಿ, ಕೂಡ್ಲೂರು-ಕೂಡ್ಲುಮಂಗಳೂರು ವ್ಯಾಪ್ತಿಯವರೆಗೆ ಸುಮಾರು ೭.೫ ಕಿ.ಮೀ. ಉದ್ದದ ಕಾವೇರಿ ನದಿ ತೀರದಲ್ಲಿ ಯೋಜನೆ ರೂಪಿಸಲಾಗಿದೆ.
ಕಾವೇರಿ ನೀರಾವರಿ ನಿಗಮದ ಉಸ್ತುವಾರಿಯಲ್ಲಿ ಮಂಗಳೂರಿನ ಬ್ರಹ್ಮರ್ ಟೆಕ್ನಾಲಜೀಸ್ ಸಂಸ್ಥೆ ೨೦೨೨ರಲ್ಲಿ ಮೂರು ಹಂತಗಳಲ್ಲಿ ಡ್ರೋನ್ ಸರ್ವೆ ನಡೆಸಿದೆ. ನದಿ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳು, ಪ್ರವಾಹದ ಹರಿವು ಹಾಗೂ ನೀರಿನ ಮಟ್ಟ ಸೇರಿದಂತೆ ವಿವಿಧ ಮಾಹಿತಿಯನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಸಮಗ್ರ ವರದಿಯನ್ನು ಕಾವೇರಿ ನೀರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಸಂತೋಷ್ ಚಂದ್ರ ‘ಶಕ್ತಿ’ ತಿಳಿಸಿದ್ದಾರೆ.
ಹಿಂದಿನ ಮಳೆಗಾಲದ ದಾಖಲೆಗಳು ಹಾಗೂ ಸತತ ಮೂರು ವರ್ಷಗಳ ಪ್ರವಾಹ ಪರಿಸ್ಥಿತಿಯ ಮಾಹಿತಿಯನ್ನು ಆಧರಿಸಿ ಕಾವೇರಿ ನದಿಯ ಗರಿಷ್ಟ ಪ್ರವಾಹ ಮಟ್ಟವನ್ನು ಗುರುತಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವೈಜ್ಞಾನಿಕ ರೀತಿಯಲ್ಲಿ ಪ್ರವಾಹ ನಿಯಂತ್ರಿಸುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದರು.
೨೦ ಮೀಟರ್ ಎತ್ತರದ ತಡೆಗೋಡೆ
ಪ್ರವಾಹಕ್ಕೆ ತುತ್ತಾಗುವ ನದಿ ತೀರದ ವ್ಯಾಪ್ತಿಯಲ್ಲಿ ಸುಮಾರು ೨೦ ಮೀಟರ್ ಎತ್ತರದ ತಡೆಗೋಡೆ ನಿರ್ಮಿಸುವ ಪ್ರಸ್ತಾವನೆ ಇದೆ. ಇದರೊಂದಿಗೆ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ, ವಾಕಿಂಗ್ ಪಾಥ್, ಉದ್ಯಾನವನ ಹಾಗೂ ಹಸಿರು ಪ್ರದೇಶಗಳ ಅಭಿವೃದ್ಧಿಗೂ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮಳೆಗಾಲದಲ್ಲಿ ಪ್ರವಾಹದ ನೀರು ಯಾವುದೇ ರೀತಿಯಲ್ಲಿ ಬಡಾವಣೆಗಳಿಗೆ ನುಗ್ಗದಂತೆ ತಂತ್ರಜ್ಞಾನ ಅಳವಡಿಸಲಾಗುವುದು. ಬಡಾವಣೆಗಳಿಂದ ಹೊರಹೋಗುವ ನೀರನ್ನು ನದಿಗೆ ಸುರಕ್ಷಿತವಾಗಿ ಹರಿಸಲು ಗೇಬಿಯನ್ ವಾಲ್ ತಂತ್ರಜ್ಞಾನ ಬಳಸುವ ಪ್ರಸ್ತಾವನೆಯೂ ಇದೆ ಎಂದು ಸಂತೋಷ್ ಚಂದ್ರ ವಿವರಿಸಿದ್ದಾರೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪದ ನದಿ ತೀರದಲ್ಲಿ ಕಾವೇರಿ ಆರತಿ ಕೇಂದ್ರ, ಆಂಫಿ ಥಿಯೇಟರ್ ಸೇರಿದಂತೆ ಮನರಂಜನಾ ವ್ಯವಸ್ಥೆಗಳನ್ನು ನಿರ್ಮಿಸುವ ಪ್ರಸ್ತಾವನೆಯಿದೆ. ಸ್ಥಳೀಯ ವ್ಯಾಪಾರ ವಹಿವಾಟು ಹೆಚ್ಚಿಸುವ ಹಾಗೂ ಜನರಿಗೆ ಆದಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ವ್ಯಾಪಾರಿ ಕೇಂದ್ರಗಳನ್ನೂ ಯೋಜನೆಯಲ್ಲಿ ಸೇರಿಸಲಾಗಿದೆ.
ಸುಮಾರು ೪೦೦ ಪುಟಗಳ ಸಮಗ್ರ ವರದಿಯನ್ನು ಕಾವೇರಿ ನೀರಾವರಿ ನಿಗಮದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರ ಯೋಜನೆಯನ್ನು ಪರಿಶೀಲಿಸಿ ಅನುಮೋದನೆ ನೀಡಬೇಕಾಗಿದೆ. ಯೋಜನೆ ಸಂಪೂರ್ಣ ಪರಿಸರ ಸ್ನೇಹಿಯಾಗಿದ್ದು, ಕಾಮಗಾರಿಯಲ್ಲಿ ಯಾವುದೇ ರೀತಿಯ ಕಾಂಕ್ರೀಟ್ ಬಳಕೆ ಇರುವುದಿಲ್ಲ. ಕಾವೇರಿ ನದಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾಮಗಾರಿ ಕೈಗೊಳ್ಳಲಾಗುವುದು. ಚರಂಡಿ ನೀರು ನದಿಗೆ ಸೇರುವುದನ್ನು ತಡೆಯುವ ವ್ಯವಸ್ಥೆಯನ್ನೂ ಯೋಜನೆಯಲ್ಲಿ ಅಳವಡಿಸಲಾಗುವುದು ಎಂಬ ಮಾಹಿತಿಯನ್ನು ಸಂತೋಷ್ ಚಂದ್ರ ನೀಡಿದ್ದಾರೆ.
ಯಾವ ಪ್ರದೇಶಗಳಿಗೆ ಪ್ರಯೋಜನ?
೨೦೧೮ರಿಂದ ಸತತ ಮೂರು ವರ್ಷಗಳ ಕಾಲ ಕಾವೇರಿ ಪ್ರವಾಹಕ್ಕೆ ತುತ್ತಾದ ಯೋಗಾನಂದ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ರಸೂಲ್ ಬಡಾವಣೆ, ಸಾಯಿ ಬಡಾವಣೆ, ಕುವೆಂಪು ಬಡಾವಣೆ ಹಾಗೂ ಮಾದಾಪಟ್ಟಣ ವ್ಯಾಪ್ತಿಯಲ್ಲಿ ಡ್ರೋನ್ ಸರ್ವೆ ನಡೆಸಲಾಗಿತ್ತು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಉಸ್ತುವಾರಿಯಲ್ಲಿ ಖಾಸಗಿ ಸಂಸ್ಥೆ ಈ ಸರ್ವೆ ಕಾರ್ಯ ನಡೆಸಿ ಪ್ರವಾಹಪೀಡಿತ ಪ್ರದೇಶಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿತ್ತು.
ಹಿAದಿನ ಪ್ರವಾಹ, ಹೂಳು ತೆರವು
೨೦೧೮ರಿಂದ ಸತತ ಮೂರು ವರ್ಷಗಳ ಕಾಲ ಕಾವೇರಿ ನದಿ ಪ್ರವಾಹದಿಂದ ಕುಶಾಲನಗರದ ಹಲವು ಬಡಾವಣೆಗಳು ಜಲಾವೃತಗೊಂಡಿದ್ದವು. ಇದರಿಂದ ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸುವಂತೆ ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು.
ಸಮಸ್ಯೆಗೆ ತಕ್ಷಣ ಸ್ಪಂದಿಸಿದ್ದ ಅಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸುಮಾರು ೨ ಕೋಟಿ ವೆಚ್ಚದಲ್ಲಿ ಕಾವೇರಿ ನದಿಯ ಹೂಳು ತೆರವು ಕಾಮಗಾರಿ ಕೈಗೊಳ್ಳುವ ಮೂಲಕ ಪ್ರವಾಹದ ತೀವ್ರತೆ ತಗ್ಗಿಸಲು ಕ್ರಮ ಕೈಗೊಂಡಿದ್ದರು. ಇದರಿಂದ ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳ ನಿವಾಸಿಗಳಿಗೆ ತಾತ್ಕಾಲಿಕ ನೆಮ್ಮದಿ ದೊರೆತಿತ್ತು.
ಇದೀಗ ರೂ. ೮೦೦ ಕೋಟಿಯ ಸಮಗ್ರ ಯೋಜನೆಯ ಪ್ರಸ್ತಾವನೆ ಸರ್ಕಾರದ ಮುಂದಿರುವುದರಿAದ, ಇದು ಅನುಮೋದನೆಗೊಂಡು ಅನುಷ್ಠಾನಗೊಂಡರೆ ಕುಶಾಲನಗರದ ದೀರ್ಘಕಾಲದ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೇ ಎಂಬ ನಿರೀಕ್ಷೆ ಸ್ಥಳೀಯರಲ್ಲಿ ಮೂಡಿದೆ.