ಮಡಿಕೇರಿ, ಆ. ೩೦ ನಗರಸಭೆಯ ಜನಪ್ರತಿನಿಧಿಗಳು ಹಾಗೂ ಶಾಸಕ ಡಾ. ಮಂತರ್‌ಗೌಡ ಅವರು ಸುಸ್ಥಿರ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ರೂಪಿಸುವತ್ತ ಚಿತ್ತ ಹರಿಸಿದ್ದಾರೆ.

ನಗರಸಭೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸುಸ್ಥಿರ ಕಸ ವಿಲೇವಾರಿ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ‘ದಿ ಕ್ಲೀನ್ ಕೂರ್ಗ್ ಇನಿಷಿಯೇಟಿವ್’ ಸಂಸ್ಥೆಯ ತಜ್ಞರು ನೀಡಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಜನಪ್ರತಿನಿಧಿಗಳು, ಒಂದೆರಡು ದಿನಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಮಂತರ್‌ಗೌಡ, ಕಸ ವಿಲೇವಾರಿಗೆ ಜಾಗದ ಕೊರತೆ ಇದೆ ಎಂದು ಹೊಸ ಜಾಗ ಹುಡುಕಿ ಅದನ್ನೂ ಮತ್ತೊಂದು ಸ್ಟೋನ್‌ಹಿಲ್‌ನಂತೆ ಕಸದ ದಿಬ್ಬವನ್ನಾಗಿ ಮಾಡುವುದಕ್ಕೆ ಅವಕಾಶ ನೀಡಬಾರದು. ಇನ್ನು ಮುಂದೆ ಸುಸ್ಥಿರ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ರೂಪಿಸುವತ್ತ ಗಮನ ಹರಿಸಬೇಕು. ಈ ಕಾರ್ಯಕ್ಕೆ ಎಲ್ಲ ಸದಸ್ಯರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ ನ್ಯಾಯಾಲಯದ ಸೂಚನೆಯಂತೆ ಸ್ಟೋನ್‌ಹಿಲ್‌ನಲ್ಲಿರುವ ಕಸದ ರಾಶಿಯನ್ನು ತೆರವುಗೊಳಿಸಲಾಗುತ್ತಿದೆ. ಹೀಗಾಗಿ ಅಲ್ಲಿ ಮತ್ತೆ ಕಸ ಹಾಕಲು ಸಾಧ್ಯವಿಲ್ಲ. ಜಾಗ ನೀಡಲಾಗಿರುವ ೨ನೇ ಮೊಣ್ಣಂಗೇರಿಯಲ್ಲಿ ಅರಣ್ಯ ಇಲಾಖೆಯಿಂದ ಇನ್ನೂ ಅನುಮತಿ ದೊರೆತಿಲ್ಲ. ಕಾಟಕೇರಿಯಲ್ಲಿ ಇತ್ತೀಚೆಗೆ ಜಾಗ ನೀಡಲಾಗಿದ್ದು, ಅದು ಹೆಚ್ಚಿನ ಇಳಿಜಾರಿನಿಂದ ಕೂಡಿದೆ. ಹೀಗಾಗಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗದ ಕೊರತೆ ಎದುರಾಗಿದೆ ಎಂದು ಪೌರಾಯುಕ್ತ ಎಚ್.ಆರ್. ರಮೇಶ್ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಮಂತರ್‌ಗೌಡ, ಎಲ್ಲೆಂದರಲ್ಲಿ ಕಸ ಹಾಕುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ವೈಜ್ಞಾನಿಕ ಹಾಗೂ ಸುಸ್ಥಿರ ಕಸ ವಿಲೇವಾರಿಗೆ ವ್ಯವಸ್ಥೆ ರೂಪಿಸಬೇಕು. ಪ್ರಸ್ತುತ ಸ್ಟೋನ್‌ಹಿಲ್‌ನಲ್ಲಿ ಸಂಗ್ರಹವಾಗಿರುವ ಕಸದ ರಾಶಿ ಯಾವಾಗ ಕುಸಿಯುತ್ತದೆಯೋ ಎಂಬ ಆತಂಕವಿದೆ ಎಂದರು.

ದೂರದ ರಾಜ್ಯಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳುವ ಬದಲು ಮೈಸೂರಿನಲ್ಲಿ ಹಾಗೂ ಬೆಂಗಳೂರಿನ ಕೋರಮಂಗಲದಲ್ಲಿ ಅನುಸರಿಸಲಾಗುತ್ತಿರುವ ಸುಸ್ಥಿರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಅಧ್ಯಯನ ಮಾಡಿ, ಮಡಿಕೇರಿಯಲ್ಲಿ ಅಳವಡಿಸಿಕೊಳ್ಳಬೇಕು. ಈ ಸಂಬAಧ ಒಂದು ವಾರದೊಳಗೆ ಅಧ್ಯಯನ ಪ್ರವಾಸ ಆಯೋಜಿಸುವಂತೆ ಪೌರಾಯುಕ್ತ ರಮೇಶ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಎಸ್‌ಡಿಪಿಐ ಸದಸ್ಯ ಮನ್ಸೂರ್ ಮಾತನಾಡಿ, ನಗರದಲ್ಲಿ ಕಸ ವಿಲೇವಾರಿಗೆ ಸೂಕ್ತ ಜಾಗವೇ ಇಲ್ಲದ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ನಗರಸಭೆ ಸದಸ್ಯ ಕಾಳಚಂಡ ಅಪ್ಪಣ್ಣ ಮಾತನಾಡಿ, ಕಸ ವಿಲೇವಾರಿಯನ್ನು ಸಾಧ್ಯವಾದಷ್ಟು ಆಯಾ ವಾರ್ಡ್ಗಳಲ್ಲೇ ನಿರ್ವಹಿಸುವುದು ಸೂಕ್ತ. ಇದೇ ರೀತಿಯ ಜಾಗೃತಿಯನ್ನು ಸಾರ್ವಜನಿಕರಲ್ಲೂ ಮೂಡಿಸಬೇಕು ಎಂದು ಸಲಹೆ ನೀಡಿದರು.

‘ದಿ ಕ್ಲೀನ್ ಕೂರ್ಗ್ ಇನಿಷಿಯೇಟಿವ್’ ಸಂಸ್ಥೆಯ ಪರಿಸರ ಎಂಜಿನಿಯರ್ ಪೂಜಾ ಮಾತನಾಡಿ, ಅಗತ್ಯ ಮೂಲಸೌಕರ್ಯ ಒದಗಿಸಿದರೆ ವೈಜ್ಞಾನಿಕ ಹಾಗೂ ಸುಸ್ಥಿರ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು. ಈ ಕುರಿತು ಸಂಸ್ಥೆಯ ವತಿಯಿಂದ ವಿವರವಾದ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ನೀಡಿದರು.

ಪ್ರಾತ್ಯಕ್ಷಿಕೆ ಬಳಿಕ ಶಾಸಕ ಡಾ. ಮಂತರ್‌ಗೌಡ, ಶೀಘ್ರದಲ್ಲಿ ಡಿಪಿಆರ್ ಸಲ್ಲಿಸುವಂತೆ ಸೂಚಿಸಿದರು. ಡಿಪಿಆರ್ ಆಧರಿಸಿ ನಗರಸಭೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.

ಸ್ಟೋನ್‌ಹಿಲ್‌ನAತಹ ದೊಡ್ಡ ಜಾಗಗಳು ಮಡಿಕೇರಿ ಸುತ್ತಮುತ್ತ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ವಾರ್ಡ್ ಮಟ್ಟದಲ್ಲಿ ಅಥವಾ ಒಂದೆರಡು ವಾರ್ಡ್ಗಳನ್ನು ಸೇರಿಸಿ ಸಣ್ಣ ಪ್ರದೇಶದಲ್ಲೇ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ವ್ಯವಸ್ಥೆ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಸಂಬAಧ ಸೂಕ್ತ ಜಾಗಗಳನ್ನು ಗುರುತಿಸಲು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ನಗರಸಭಾ ಅಧ್ಯಕ್ಷೆ ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ ಹಾಜರಿದ್ದರು.