ಕುಶಾಲನಗರ, ಆ. ೩೦: ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಅಭಿವೃದ್ಧಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಸೇವೆಯ ಸ್ಮರಣೆ ಅಗತ್ಯ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದ ಪುರಸಭೆ ಆವರಣದಲ್ಲಿ ಗುಂಡುರಾಯರ ಪುತ್ಥಳಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯ ದೂರದೃಷ್ಟಿ ಇಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿರುವ ಗುಂಡೂರಾವ್ ಅವರು, ಕೇವಲ ಕುಶಾಲನಗರಕ್ಕೆ ಸೀಮಿತವಾದ ರಾಜಕಾರಣಿ ಅಲ್ಲ; ಅವರು ಕ್ಷೇತ್ರ ಶಾಸಕ, ರಾಜ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ಸೋಮವಾರಪೇಟೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
ಕುಶಾಲನಗರ ಕೂಡ್ಲೂರು ಬಳಿ ಕೈಗಾರಿಕಾ ಬಡಾವಣೆ ನಿರ್ಮಾಣ ಸೇರಿದಂತೆ ಕುಶಾಲನಗರದ ವೇಗದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ ಎಂದು ಶಾಸಕರು ಹೇಳಿದರು. ಗುಂಡೂರಾವ್ ಅವರ ಸ್ಮರಣೆಗಾಗಿ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬAಧ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್, ಮಾತನಾಡಿ, ಆರ್ ಗುಂಡೂರಾವ್ ಅವರು, ರಾಜಕೀಯ ಇಚ್ಛಾಶಕ್ತಿಯ ಮೂಲಕ ಕುಶಾಲನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಗತ್ಯ ಯೋಜನೆಗಳು ಸೌಲಭ್ಯಗಳನ್ನು ಒದಗಿಸುವ ಮೂಲಕ ಕುಶಾಲನಗರದ ಶೀಘ್ರ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ತಾಲೂಕು ರಚನೆಗೆ ರಾವ್ ಅವರು ಮೂಲ ಕಾರಣಕರ್ತರಾಗಿದ್ದಾರೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ವಕೀಲರಾದ ಆರ್ ಕೆ ನಾಗೇಂದ್ರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ ಗುಂಡೂರಾವ್ ಅವರ ಕೊಡುಗೆಗಳ ಬಗ್ಗೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾಹಿತಿ ಒದಗಿಸಿದರು. ಕುಶಾಲನಗರದ ಹಿರಿಯರು ಹಾಗೂ ಗಣಪತಿ ದೇವಾಲಯ ಸಮಿತಿಯ ಮಾಜಿ ಅಧ್ಯಕ್ಷರಾದ ವಿ ಎನ್ ವಸಂತಕುಮಾರ್ ಮಾತನಾಡಿದರು. ಪುತ್ಥಳಿ ನಿರ್ಮಾಣಕ್ಕೆ ಅಡಿಪಾಯ ಕಾಮಗಾರಿಗೆ ಸುಮಾರು ೧೫ ಲಕ್ಷ ರೂಗಳ ವೆಚ್ಚ ಹಾಗೂ ೬೫ ಲಕ್ಷದಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡುವ ಬಗ್ಗೆ ಇಂಜಿನಿಯರ್ ಅರ್ಬಸ್ ಅಹಮದ್ ಮಾಹಿತಿ ಒದಗಿಸಿದರು.
ಪುರಸಭೆ ಮುಖ್ಯ ಅಧಿಕಾರಿ ಕೆ.ಎಲ್. ಗಿರೀಶ್, ಹಿರಿಯ ಆರೋಗ್ಯ ಅಧಿಕಾರಿ ಉದಯಕುಮಾರ್, ಗುಂಡೂರಾವ್ ಒಡನಾಡಿಗಳಾದ ನಿವೃತ್ತ ಶಿಕ್ಷಕ ಎಂ.ಎಚ್. ನಜೀರ್ ಅಹ್ಮದ್, ರಾವ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ ಎಂ ಎಚ್ ಫಜಲುಲ್ಲಾ, ಗುಂಡುರಾವ್ ಅವರ ಕುಟುಂಬ ಸದಸ್ಯರು ಹಾಗೂ ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್ ಮತ್ತು ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.