ಐಗೂರು, ಆ. ೩೦: ಕಾಜೂರು ಹಾಗೂ ಯಡವಾರೆ ಗ್ರಾಮಗಳಿಂದ ತಾಲೂಕು ಕೇಂದ್ರ ಸೋಮವಾರಪೇಟೆಗೆ ನೂತನ ಬಸ್ ಮಾರ್ಗ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರಪೇಟೆ ತಾಲೂಕು ಕೇಂದ್ರಕ್ಕೆ ತೆರಳಲು ಕಾಜೂರು ಹಾಗೂ ಯಡವಾರೆ ಗ್ರಾಮಸ್ಥರಿಗೆ ಐಗೂರು ಪ್ರಮುಖ ಸಂಪರ್ಕ ಕೇಂದ್ರವಾಗಿದೆ. ಕಾಜೂರಿನಿಂದ ಐಗೂರಿಗೆ ಸುಮಾರು ೨ ಕಿ.ಮೀ. ಹಾಗೂ ಯಡವಾರೆಯಿಂದ ಐಗೂರಿಗೆ ಸುಮಾರು ೪ ಕಿ.ಮೀ. ದೂರವಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕಾರ್ಮಿಕರು ನಿತ್ಯದ ಕೆಲಸಗಳಿಗೆ ಸೋಮವಾರಪೇಟೆಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಡಿಕೇರಿಯಿಂದ ಬೆಳಿಗ್ಗೆ ೭.೩೦ಕ್ಕೆ ಸೋಮವಾರಪೇಟೆ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾಜ್ಯ ಸಾರಿಗೆ ಬಸ್ನ್ನು ಕಾಜೂರು ಮಾರ್ಗವಾಗಿ ಸಂಚರಿಸುವAತೆ ಹಾಗೂ ಸಂಜೆ ೫.೪೫ಕ್ಕೆ ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ಬೇಲೂರು-ಮಡಿಕೇರಿ ಮಾರ್ಗದ ಬಸನ್ನು ಕಾಜೂರು ಮೂಲಕ ಸಂಚರಿಸುವAತೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ಡಾ. ಮಂತರ್ ಗೌಡ, ಕಾಜೂರು ರಸ್ತೆಯನ್ನು ದುರಸ್ತಿಪಡಿಸಿದ ಬಳಿಕ ಬಸ್ ಸಂಚಾರದ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.