ಮಡಿಕೇರಿ, ಆ. ೩೦: ಮಹಾನ್ ಚೇತನಗಳ ಜಯಂತಿ ಆಚರಣೆ ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಅವರ ವಿಚಾರಧಾರೆ ಹಾಗೂ ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತಾಗಬೇಕು ಎಂದು ಗಣ್ಯರು ಕರೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮ ನಡೆಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ ಮಕ್ಕಂದೂರು ಸಾಧ್ಯ ಟ್ರಸ್ಟಿ ಆಫ್ ಸೋಶಿಯಲ್ ಡೆವಲಪ್‌ಮೆಂಟ್ ಟ್ರಸ್ಟ್ನ ಬಿ.ಎನ್. ರಮೇಶ್, ಜಾತಿ, ಅಸ್ಪೃಶ್ಯತೆ ಹಾಗೂ ಅಸಮಾನತೆ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ ಶಿಕ್ಷಣ, ಸಂಘಟನೆ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಸಮಾನತೆಯ ಅರಿವು ಮೂಡಿಸಿದ ಮಹಾನ್ ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಪ್ರಮುಖರು ಎಂದರು.

ಸಾಮಾಜಿಕ ಅನ್ಯಾಯದ ವಿರುದ್ಧ ಅಹಿಂಸೆಯ ಮಾರ್ಗದಲ್ಲಿ ಹೋರಾಡಿದ ಅವರು, ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲದವರಿಗಾಗಿ ಅರುವಿಪ್ಪುರಂನಲ್ಲಿ ಶಿವಾಲಯ ಸ್ಥಾಪಿಸಿ ಶಿವಲಿಂಗ ಪ್ರತಿಷ್ಠಾಪಿಸುವ ಮೂಲಕ ಎಲ್ಲರಿಗೂ ಪೂಜೆಯ ಹಕ್ಕಿದೆ ಎಂಬ ಸಂದೇಶ ಸಾರಿದರು. ದೇವಾಲಯಗಳು ಕೇವಲ ಪೂಜಾ ಸ್ಥಳಗಳಾಗದೆ ಶಿಕ್ಷಣ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರಗಳಾಗಬೇಕು ಎಂದು ಪ್ರತಿಪಾದಿಸಿದ್ದರು ಎಂದರು.

‘ಒAದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ನಾರಾಯಣ ಗುರುಗಳ ಸಂದೇಶ ಮಾನವ ಸಮಾನತೆ ಹಾಗೂ ಸೌಹಾರ್ದತೆಯ ಪ್ರತೀಕವಾಗಿದೆ. ಜಾತಿ-ಮತಗಳ ಎಲ್ಲೆಗಳನ್ನು ಮೀರಿ ಮಾನವೀಯತೆ ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಬಿ.ಎನ್. ರಮೇಶ್ ಹೇಳಿದರು.

ಕಾಯಕಯೋಗಿ ಶಿವಶರಣ ನುಲಿಯ ಚಂದಯ್ಯ ಅವರ ಕುರಿತು ಉಪನ್ಯಾಸ ನೀಡಿದ ಸೋಮವಾರಪೇಟೆ ಸೆಂಟ್ ಜೋಸೆಫ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಅರುಣ್ ಕುಮಾರ್, ೧೨ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ತತ್ವ ಹಾಗೂ ಸಮಾನತೆಯ ಸಂದೇಶದಿAದ ಪ್ರೇರಣೆಗೊಂಡ ನುಲಿಯ ಚಂದಯ್ಯ ದುಡಿಮೆಯನ್ನೇ ಆರಾಧನೆಯನ್ನಾಗಿಸಿಕೊಂಡು ಬದುಕಿದವರು. ಶ್ರಮಪಟ್ಟು ಗಳಿಸಿದ ಸಂಪಾದನೆಯಿAದಲೇ ದೇವರಿಗೆ ನೈವೇದ್ಯ ಸಲ್ಲಿಸಬೇಕು ಎಂಬ ನಿಲುವು ಹೊಂದಿದ್ದ ಅವರು, ಪ್ರಾಮಾಣಿಕ ಪರಿಶ್ರಮ, ಸ್ವಾವಲಂಬನೆ, ತ್ಯಾಗ ಹಾಗೂ ದಾಸೋಹದ ಮಹತ್ವವನ್ನು ಸಾರಿದರು. ಇಂದಿನ ಪೀಳಿಗೆ ಅವರ ಜೀವನದಿಂದ ಕಾಯಕದ ಮಹತ್ವ ಹಾಗೂ ಸಮಾಜಮುಖಿ ಬದುಕಿನ ಪಾಠ ಕಲಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಬಿ.ಆರ್. ಲಿಂಗಪ್ಪ, ನಾರಾಯಣ ಗುರುಗಳು ನೀಡಿದ ‘ಸಂಘಟಿತರಾಗಿ, ವಿದ್ಯಾವಂತರಾಗಿ’ ಎಂಬ ಸಂದೇಶವನ್ನು ಇಂದಿನ ಸಮಾಜ ಸ್ಮರಿಸಬೇಕು ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಎಲ್. ದಿವಾಕರ ಮಾತನಾಡಿ, ಮಹನೀಯರು ಯಾವುದೇ ಒಂದು ಜಾತಿಗೆ ಸೀಮಿತರಲ್ಲ. ಅವರು ಇಡೀ ಮಾನವಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಹೀಗಾಗಿ ಅವರ ಜಯಂತಿ ಆಚರಣೆಗಳು ಎಲ್ಲ ಸಮುದಾಯದ ಜನರನ್ನು ಒಗ್ಗೂಡಿಸುವ ವೇದಿಕೆಯಾಗಬೇಕು ಎಂದರು.

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಮಹನೀಯರ ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಸಮಾಜದ ಪ್ರಮುಖರಾದ ಚೆನ್ನಪ್ಪ, ಗಂಗಾಧರ್, ರಂಜನ್, ಪ್ರತೀಪ, ಸುಧೀರ್, ಕುಸುಮಾವತಿ, ಚಂದ್ರಹಾಸ್ ಸೇರಿದಂತೆ ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ಬ್ಲಾಸA ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಸಾಹಿತಿ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.