ಸೋಮವಾರಪೇಟೆ, ಆ.೩೦ : ಇಲ್ಲಿನ ಸೋಮವಾರಪೇಟೆ ಒಕ್ಕಲಿಗರ ಸೌಹಾರ್ದ ಸಹಕಾರ ಸಂಘವು ೨೦೨೫-೨೬ ನೇ ಸಾಲಿನಲ್ಲಿ ರೂ.೧೦,೩೯,೮೯೮ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಜೆ. ದೀಪಕ್ ಹೇಳಿದರು.

ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಂಘದ ೨೦೨೫-೨೬ ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು ಮೂರು ವರ್ಷಗಳನ್ನು ಪೂರೈಸಿದ್ದು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ೨೦೨೫-೨೬ನೇ ಸಾಲಿನಲ್ಲಿ ೪೮ ಹೊಸ ಸದಸ್ಯರು ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಸಂಘದ ಒಟ್ಟು ಸದಸ್ಯರ ಸಂಖ್ಯೆ ೩೮೭ಕ್ಕೆ ಏರಿಕೆಯಾಗಿದೆ.

ಈ ವರ್ಷ ಸಂಘದ ಪಾಲು ಬಂಡವಾಳವೂ ಕಳೆದ ವರ್ಷಗಿಂತ ಹೆಚ್ಚಳವಾಗಿದ್ದು, ವರ್ಷಾಂತ್ಯಕ್ಕೆ ಒಟ್ಟು ರೂ.೧೯,೧೮,೦೦೦ ತಲುಪಿದೆ. ಸದಸ್ಯರಿಂದ ಠೇವಣಿ ಸಂಗ್ರಹಿಸಿ, ಅಗತ್ಯವಿರುವ ಸದಸ್ಯರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.

ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ರೈತರಿಗೆ ಮರಣ ಶಾಸನವಾಗಿರುವ ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕು. ಕಸ್ತೂರಿರಂಗನ್ ವರದಿಯ ವಿರುದ್ಧ ಎಲ್ಲಾ ರೈತರು ದಿಟ್ಟವಾಗಿ ವಿರೋಧ ವ್ಯಕ್ತಪಡಿಸಬೇಕು. ಕೊಡಗಿನ ರೈತರು ದೊಡ್ಡ ಮಟ್ಟದಲ್ಲಿ ಒಂದಾಗಿ ಹೋರಾಟ ನಡೆಸಿ, ತಮ್ಮ ವಿರೋಧದ ಧ್ವನಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಒತ್ತಾಯಿಸಿ, ಸರ್ಕಾರದ ಕರಡು ಅಧಿಸೂಚನೆಗೆ ಸಂಘದ ವತಿಯಿಂದ ಆಕ್ಷೇಪಣೆ ಸಲ್ಲಿಸಲು ತೀರ್ಮಾನಿಸಲಾಯಿತು. ರೈತರು ಹಾಗೂ ಜನಸಾಮಾನ್ಯರ ಹಿತದೃಷ್ಟಿಯಿಂದ ವರದಿಯ ವಿರುದ್ಧ ಸಂಘಟಿತವಾಗಿ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಲಾಯಿತು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ಅಭಿವೃದ್ಧಿ ಅಧಿಕಾರಿ ಸುರೇಶ್, ನಿರ್ದೇಶಕರುಗಳಾದ ಪಿ.ಕೆ.ರವಿ, ನತೀಶ್ ಮಂದಣ್ಣ, ಹೆಚ್.ಎಸ್.ವಸಂತ್ ಕುಮಾರ್, ಗಿರೀಶ್ ಮಲ್ಲಪ್ಪ, ಹೆಚ್.ಕೆ.ಪ್ರಸಿ, ಜಿ.ಪಿ. ಕಿಶೋರ್ ಕುಮಾರ್, ಎಂ. ಲೋಕೇಶ್ವರಿ ಗೋಪಾಲ್, ಯು.ಎಂ. ಸುಮಲತ, ಕಾರ್ಯದರ್ಶಿ ದಯಾನಂದ, ಲೆಕ್ಕ ಪರಿಶೋಧಕ ಕೆ.ಎಲ್. ವಿಜೇತ್ ಹಾಗೂ ಸಿ.ಎನ್.ಸ್ನೇಹ ಇದ್ದರು.