ಸೋಮವಾರಪೇಟೆ, ಆ. ೨೮: ಸದಾ ರಾಜಕೀಯ, ಕಾರ್ಯಕರ್ತರ ಭೇಟಿ, ಪಕ್ಷ ಸಂಘಟನೆ, ಕ್ಷೇತ್ರದ ಅಭಿವೃದ್ಧಿ, ಸಾರ್ವಜನಿಕರ ಅಹವಾಲು ಆಲಿಕೆಯಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಜನಪ್ರತಿನಿಧಿಗಳು, ಹೆಬ್ಬಾಲೆಯ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಜಿಲ್ಲೆಯ ವಿವಿಧ ಭಾಗದಿಂದ ಆಗಮಿಸಿದ್ದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗುವ ಮೂಲಕ ಕೆಸರಿನೋಕುಳಿಯಲ್ಲಿ ಮಿಂದೆದ್ದರು.
ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸಂಘಟನೆಯ ವತಿಯಿಂದ ಹೆಬ್ಬಾಲೆ ಗ್ರಾಮದ ಆದರ್ಶ್ ಬಸವರಾಜು ಅವರ ಗದ್ದೆಯಲ್ಲಿ ಆಯೋಜಿಸಿದ್ದ ೮ನೇ ವರ್ಷದ ಗದ್ದೆ ನಾಟಿ ಸಂಭ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಾವಿರಾರು ಮಂದಿ ಭಾಗವಹಿಸಿ, ಮಳೆಯ ನಡುವೆಯೂ ಕ್ರೀಡಾಸ್ಫೂರ್ತಿ ಮೆರೆದರು.
ಭೂಮಿ ನಮ್ಮ ತಾಯಿ
ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬೆಂಗಳೂರು ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಗೌಡ ಅವರು, ಭೂಮಿ ನಮ್ಮ ತಾಯಿಯಾಗಿದ್ದು, ಕೃಷಿ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಕೃಷಿ ನೇಪಥ್ಯಕ್ಕೆ ಸರಿಯುತ್ತಿರುವ ಇಂದಿನ ದಿನಮಾನದಲ್ಲಿ ಗದ್ದೆ ನಾಟಿಯ ಮೂಲಕ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಯಿಫಾ ಸಂಘಟನೆ ಮುಂದಾಗಿರುವುದು ಶ್ಲಾಘನೀಯ ಎಂದ ಅವರು, ನಮ್ಮ ಸಂಸ್ಕೃತಿ ಮತ್ತು ಕೃಷಿ ಪರಂಪರೆಯನ್ನು ಉಳಿಸಲು ಎಲ್ಲರೂ ಮುಂದಾಗಬೇಕು. ಕೇವಲ ಸಂಪಾದನೆಯ ಹಿಂದೆ ಓಡುವುದರಿಂದ ಬದುಕಿನಲ್ಲಿ ಭಾವನೆ ಹಾಗೂ ಕನಸುಗಳನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಭೂಮಿ ನಮ್ಮ ತಾಯಿ. ಆಕೆಯನ್ನು ರಕ್ಷಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರಗಳು ಇನ್ನಷ್ಟು ಗಮನಹರಿಸಬೇಕಿದೆ ಎಂದು ಹೇಳಿದರು.ಗ್ರಾಮೀಣ ಭಾಗಗಳಲ್ಲಿ ಉತ್ತಮ ಇಂಟರ್‌ನೆಟ್ ಹಾಗೂ ಗುಣಮಟ್ಟದ ವಿದ್ಯುತ್ ಸೌಲಭ್ಯ ಕಲ್ಪಿಸಿದರೆ, ಇಲ್ಲಿಯೇ ಕುಳಿತು ವಿಶ್ವಕ್ಕೆ ಸೇವೆ ಸಲ್ಲಿಸುವ ಅವಕಾಶವಿದೆ. ಯುವಜನರು ವಲಸೆ ಹೋಗದಂತೆ ಸ್ಥಳೀಯವಾಗಿಯೇ ಕೈಗಾರಿಕೆಗಳು ಹಾಗೂ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಗ್ರಾಮೀಣ ಭಾಗದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ನಿಮ್ಮ ಜಮೀನು ನಿಮ್ಮಲ್ಲೇ ಇರಲಿ, ನಿಮ್ಮ ಸಂಸ್ಕೃತಿಯೂ ನಿಮ್ಮಲ್ಲೇ ಉಳಿಯಲಿ ಎಂದು ಕಿವಿಮಾತು ಹೇಳಿದರು.
ಕೃಷಿ ಪರಂಪರೆ ಉಳಿಸಿ
ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ,
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡದೆ, ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಮೂಲಕ ಕೃಷಿ ಪರಂಪರೆಯನ್ನು ಉಳಿಸಬೇಕು. ಕೃಷಿ ಭೂಮಿ ಕೇವಲ ಆದಾಯದ ಮೂಲವಲ್ಲ, ಅದು ನಮ್ಮ ಆಹಾರ ಭದ್ರತೆ ಹಾಗೂ ಪರಿಸರ ಸಂರಕ್ಷಣೆಯ ಪ್ರಮುಖ ಆಧಾರವಾಗಿದೆ. ಆದ್ದರಿಂದ ಕೃಷಿ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಸುವುದನ್ನು ನಿಯಂತ್ರಿಸಿ, ರೈತರು ತಮ್ಮ ಜಮೀನಿನಲ್ಲಿ ಕೃಷಿ ಕಾರ್ಯ ಮುಂದುವರಿಸುವAತೆ ಪ್ರೋತ್ಸಾಹಿಸಬೇಕು ಎಂದರು. ಕೊಡಗಿನ ಕೃಷಿ ಪದ್ಧತಿ, ಪರಿಸರ ಹಾಗೂ ಇಲ್ಲಿನ ವಿಶಿಷ್ಟ ಕೃಷಿ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕೃಷಿ ಭೂಮಿಯನ್ನು ಸಂರಕ್ಷಿಸುವ ಮೂಲಕ ಜಿಲ್ಲೆಯ ಕೃಷಿ ಪರಂಪರೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದರು.
ಗಾಳಿ - ನೀರು ಸಂರಕ್ಷಣೆ ಮಾಡಿ
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಯಿಫಾ ಸಂಘಟನೆ ಮಾಡಿರುವ ಸೇವೆ ಅಪಾರವಾಗಿದೆ. ಯುವಕರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆ ಉತ್ತಮ ಕೆಲಸ ಮಾಡುತ್ತಿದೆ ಎಂದರು. ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡದೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಕೊಡಗಿನ ಆಚಾರ-ವಿಚಾರ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕೊಡಗಿನ ಶುದ್ಧ ಗಾಳಿ ಮತ್ತು ನೀರು ಬೇರೆಲ್ಲೂ ಸಿಗುವುದಿಲ್ಲ ಮುಂದೆಯೂ ಅದನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ
ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ ಕೊಡಗಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಅನುಷ್ಠಾನ ವಿರುದ್ಧ ರಾಜ್ಯ ವಿಧಾನ ಸಭೆಯಲ್ಲಿ ಚರ್ಚೆಯಾದರೆ ಸಾಲದು; ಪ್ರತಿ ಗ್ರಾಮ ಪಂಚಾಯಿತಿಗಳಲಿ ಗ್ರಾಮ ಸಭೆಗಳನ್ನು ನಡೆಸಿ ವರದಿ ತಿರಸ್ಕಾರ ಮಾಡುವ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಎಂದರು.
ಸAಘಟನೆಯ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ (ಙIಈಂ) ವತಿಯಿಂದ ೨೦೧೮ರಿಂದ ನಿರಂತರವಾಗಿ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಯುವಜನರಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುವುದು ಹಾಗೂ ಕೃಷಿ ಸಂಸ್ಕೃತಿಯೊAದಿಗೆ ಅವರ ನಂಟನ್ನು ಬೆಸೆಯುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.ಯುವಜನರಲ್ಲಿ ಕೃಷಿ ಚಟುವಟಿಕೆಗಳ ಬಗ್ಗೆ ಆಸಕ್ತಿ ಮತ್ತು ಉತ್ತೇಜನ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಾಟಿ ಕಾರ್ಯಕ್ರಮ ಹಾಗೂ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಎಂದರು.
ವೇದಿಕೆಯಲ್ಲಿ ಯಿಫಾ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಎರೋನಿಕ್ಸ್ ಹೆಚ್ ವಿಎಸಿ ನ ಮಾಲೀಕ ಕೀರ್ತಿ ಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ರಾಜಶೇಖರ್.ಹೆಚ್.ಎಸ್,ನಿವೃತ್ತ ಸೇನಾ ಸಿಬ್ಬಂದಿ ಪುಟ್ಟೇಗೌಡ,ಬಿಜೆಪಿ ಮುಖಂಡ ಚಂದ್ರಶೇಖರ್ ಹೇರೂರು,ಈವೆಂಟ್ ಪ್ರಾಪರ್ಟಿ ಮಾಲೀಕರಾದ ಬಸವರಾಜ್, ಗದ್ದೆಯ ಮಾಲೀಕ ಆದರ್ಶ್, ಬಿ.ಬಿ.ಭಾರತೀಶ್, ಗೌತಮ್ ಇದ್ದರು. ಐ.ಆರ್.ಎಸ್. ರಾಘವೇಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು. - ವಿಜಯ್