ನಾಪೋಕ್ಲು, ಆ. ೨೮: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬಹುದು ಎಂದು ಚೇರಂಬಾಣೆ ಅರುಣ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಪಿ.ಎಂ ಸುಬ್ಬಯ್ಯ ಹೇಳಿದರು.

ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಭಾಗಮಂಡಲ ವಲಯ ಪ್ರೌಢಶಾಲಾ ವಿಭಾಗದ ಬಾಲಕರ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಯಶಸ್ಸನ್ನು ಸಾಧಿಸಬೇಕು ಎಂದರು.

ಅರುಣ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ.ಆರ್ ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಮುಖ್ಯ, ಸೋಲು ಗೆಲುವು ಸಾಮಾನ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಕುಟ್ಟೇಟಿರ ಕುಂಞಪ್ಪ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಗಣನೀಯವಾಗಿ ಇಳಿಮುಖಗೊಂಡಿದೆ. ಇತ್ತೀಚೆಗೆ ಹಲವರು ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಮೊಬೈಲ್ ಬಳಕೆಗೆ ಕಡಿವಾಣ ಹಾಕಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಸಿಕೊಂಡರೆ ಮಾನಸಿಕವಾಗಿ, ಶಾರೀರಿಕವಾಗಿ ಸದೃಢರಾಗಬಹುದು ಎಂದರು.

ಮುಖ್ಯ ಶಿಕ್ಷಕ ಸಿ.ಆರ್ ಲೋಕೇಶ್ ಮಾತನಾಡಿ, ಭಾಗಮಂಡಲ ವಲಯದ ವಿವಿಧ ಶಾಲೆಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದ್ದು ಸಾಮರಸ್ಯದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಭಾಗಮAಡಲ ವಲಯದ ಅಟಲ್ ಬಿಹಾರಿ ವಾಜಪೇಯಿ ಶಾಲೆ, ಕಾವೇರಿ ಪ್ರೌಢಶಾಲೆ, ಅರುಣ ಪ್ರೌಢಶಾಲೆ, ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆ, ಉದಯ ಪ್ರೌಢಶಾಲೆ ಹಾಗೂ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಬಡ್ಡಿ ಪಂದ್ಯಾಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ತಂಡ, ಖೊಖೊ ಪಂದ್ಯಾಟದಲ್ಲಿ ಚೇರಂಬಾಣೆಯ ಅರುಣ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡ, ವಾಲಿಬಾಲ್ ಪಂದ್ಯಾಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ತಂಡ ಹಾಗೂ ಥ್ರೋಬಾಲ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾದವು.

ಉದ್ಘಾಟನಾ ಸಮಾರಂಭದಲ್ಲಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ನಾಟೋಳಂಡ ವಿಜು ದೇವಯ್ಯ, ಮುಖ್ಯ ಶಿಕ್ಷಕ ಕುದುಪಜೆ ಕವನ್, ದೈಹಿಕ ಶಿಕ್ಷಣ ಶಿಕ್ಷಕ ಅಯ್ಯಪ್ಪ, ವಿವಿಧ ಪ್ರೌಢಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ನೇತೃತ್ವದಲ್ಲಿ ಕ್ರೀಡಾಕೂಟ ನಡೆಯಿತು.