ಮಡಿಕೇರಿ, ಆ. ೨೮: ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ ೧೬ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆ ಅಕ್ಟೋಬರ್ ೨೬ ರಿಂದ ಚಾಲನೆಗೊಳ್ಳಲಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮಾರ್ಗದರ್ಶಕರು ಆಗಿರುವ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.

ಅವರು ಮಡಿಕೇರಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಶುದ್ಧತೆಗೆ ಹೆಸರಾದ ಕಾವೇರಿ ನದಿ ಇತ್ತೀಚೆಗೆ ಹಲವು ಕಾರಣಗಳಿಂದ ಕಲುಷಿತಗೊಳದೊಂದಿಗೆ ಜಲಮೂಲಗಳು ಬರಡಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಕಳೆದ ೧೫ ವರ್ಷಗಳಿಂದ ಸ್ವಚ್ಛ ಕಾವೇರಿಗಾಗಿ ಶ್ರೀ ಕ್ಷೇತ್ರ ತಲಕಾವೇರಿಯಿಂದ ತಮಿಳುನಾಡಿನ ಪೂಂಪ್‌ಹಾರ್ ತನಕ ಜಾಗೃತಿ ಯಾತ್ರೆ ನಡೆಸಿ ನದಿ ತಟದ ಜನರಿಗೆ ಕಾವೇರಿಯ ಸಂರಕ್ಷಣೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾಯಕ ನಿರಂತರವಾಗಿ ಸಾಗುತ್ತಿದೆ ಎಂದರು.

ತಮಿಳುನಾಡು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಸಾಧು ಸಂತರು ಹಾಗೂ ಕಾರ್ಯಕರ್ತರ ತಂಡ ಒಂದು ತಿಂಗಳ ಕಾಲ ನದಿ ತಟದಲ್ಲಿ ಸಾಗಿ ನದಿಯ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೨೬ ರಂದು ತಲಕಾವೇರಿ ಕ್ಷೇತ್ರದಿಂದ ಯಾತ್ರೆ ಚಾಲನೆಗೊಳ್ಳಲಿದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕರಾದ ಎಂ.ಎನ್ ಚಂದ್ರಮೋಹನ್ ಮಾತನಾಡಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಅಖಿಲ ಭಾರತ ಸನ್ಯಾಸಿ ಸಂಘ ಆಶ್ರಯದಲ್ಲಿ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ೧೬ನೇ ವರ್ಷದ ಕಾವೇರಿ ಜಾಗೃತಿ ಯಾತ್ರೆ ಅಕ್ಟೋಬರ್ ೨೬ರಂದು ತಲಕಾವೇರಿ ಕ್ಷೇತ್ರದಲ್ಲಿ ಯಾತ್ರೆಯ ಸಂಕಲ್ಪ ಮಾಡುವ ಮೂಲಕ ಗಣ್ಯರು ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಶ್ರೀರಂಗಪಟ್ಟಣದ ಡಾ ಭಾನುಪ್ರಕಾಶ್ ಶರ್ಮ, ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ ಮತ್ತು ತಮಿಳುನಾಡು ಹೊಸೂರು ಶ್ರೀ ರಮಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಖಿಲ ಭಾರತ ಸನ್ಯಾಸಿಗಳ ಸಂಘದ ೫೦ಕ್ಕೂ ಅಧಿಕ ಸಾಧು ಸಂತರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು ನವೆಂಬರ್ ೧೮ರ ತನಕ ಕಾವೇರಿ ನದಿ ತಟದಲ್ಲಿ ಯಾತ್ರೆ ಸಾಗಲಿದೆ. ಕೊಡಗು ಜಿಲ್ಲೆಯ ಭಾಗಮಂಡಲ ಕುಶಾಲನಗರ ಕಣಿವೆ ಸೇರಿದಂತೆ ಹಲವು ಕಡೆ ಕಾವೇರಿ ನದಿಗೆ ಆರತಿ ಬೆಳಗುವ ಕಾರ್ಯಕ್ರಮದೊಂದಿಗೆ ಸಾರ್ವಜನಿಕರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನದಿ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುವುದು ಎಂದರು.

೧೮ರAದು ತಮಿಳುನಾಡಿನ ಕಾವೇರಿ ಬಂಗಾಲಕೊಲ್ಲಿ ಸಮುದ್ರ ಸಂಗಮದಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಕಾವೇರಿ ಪವಿತ್ರ ತೀರ್ಥ ವಿಸರ್ಜನೆ ಸಮಾರಂಭ ನಡೆಯುವುದು ಎಂದು ಹೇಳಿದರು.

ಈ ಸಂದರ್ಭ ಮಾತನಾಡಿದ ನಮಾಮಿ ಕಾವೇರಿ ಜಿಲ್ಲಾ ಅಧ್ಯಕ್ಷರಾದ ವನಿತಾ ಚಂದ್ರಮೋಹನ್, ಪಟ್ಟಣ ಗ್ರಾಮಗಳ ಸಾರ್ವಜನಿಕ ಸ್ಥಳಗಳು, ಕಾವೇರಿ ನದಿ ತಟಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಇದೇ ಸಂದರ್ಭ ಯುವಪೀಳಿಗೆಗೆ ನದಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ಸಮಿತಿಯ ಮೂಲಕ ಯುವ ಘಟಕಕ್ಕೆ ಚಾಲನೆ ನೀಡಲಾಗುವುದು ಎಂದರು.

೧೬ನೇ ಕಾವೇರಿ ನದಿ ಜಾಗೃತಿ ಯಾತ್ರೆ ಸಂದರ್ಭ ಕುಶಾಲನಗರದಲ್ಲಿ ೧೯೦ನೇ ಮಹಾ ಆರತಿ ಕಾರ್ಯಕ್ರಮ ನಡೆಯಲಿದ್ದು, ನಂತರ ಜಿಲ್ಲೆಯ ಗಡಿಭಾಗ ಕಾವೇರಿ ನದಿ ಸೇತುವೆ ಮೇಲೆ ನಿರ್ಮಾಣಗೊಂಡಿರುವ ಕಾವೇರಿ ರೋಟರಿ ಉದ್ಯಾನದಲ್ಲಿ ಸಾಧು ಸಂತರು ಮತ್ತು ಜನಪ್ರತಿನಿಧಿಗಳು ಪರಿಸರ ಪ್ರೇಮಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಬೆಳದಿಂಗಳ ಊಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಮಾಮಿ ಕಾವೇರಿ ಬಳಗದ ಪ್ರಮುಖರಾದ ಕೊಕ್ಕಲೆರ ಧರಣಿ ಇದ್ದರು.