ಚೆಟ್ಟಳ್ಳಿ, ಆ. ೨೮: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಇಲಾಖೆ ಜಂಟಿ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಅಕ್ಕಪಡೆ ವತಿಯಿಂದ ನಲ್ಲೂರು, ಮತ್ತಿಕಾಡು, ಭೂತನಕಾಡು ಹಾಗೂ ಚೇರಳ - ಶ್ರೀಮಂಗಲದ ಗುಡಿಸಲು ಪ್ರದೇಶದ ನಿವಾಸಿಗಳಿಗೆ ವಿವಿಧ ಕಾನೂನು ಹಾಗೂ ಸಾಮಾಜಿಕ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಅಕ್ಕಪಡೆ ಸಿಬ್ಬಂದಿಗಳಾದ ಕುಮಾರಿ ಹಾಗೂ ಪವಿತ್ರ ಅವರು ಸಾರ್ವಜನಿಕರು, ಮಕ್ಕಳು, ಕಾರ್ಮಿಕರು ಹಾಗೂ ಹೆಣ್ಣು ಮಕ್ಕಳಿಗೆ ಪೋಕ್ಸೊ ಕಾಯ್ದೆ, ಮಕ್ಕಳ ಮೇಲಿನ ದೌರ್ಜನ್ಯ, ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ, ಸೈಬರ್ ಕ್ರೈಂ, ಮಹಿಳಾ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ಕಾರ್ಮಿಕರ ಸುರಕ್ಷತೆ ಹಾಗೂ ಕಡ್ಡಾಯ ಶಿಕ್ಷಣ ಕುರಿತು ಮಾಹಿತಿ ನೀಡಿದರು. ಮಕ್ಕಳು ಹಾಗೂ ಮಹಿಳೆಯರು ಯಾವುದೇ ರೀತಿಯ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಬಳಸುವ ಕುರಿತು ಅರಿವು ಮೂಡಿಸಲಾಯಿತು. ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆಯೂ ತಿಳಿಸಲಾಯಿತು.
ತುರ್ತು ಸಂದರ್ಭಗಳಲ್ಲಿ ನೆರವು ಪಡೆಯಲು ೧೧೨ ಪೊಲೀಸ್ ಸಹಾಯವಾಣಿ, ೧೮೧ ಮಹಿಳಾ ಸಹಾಯವಾಣಿ, ೧೦೯೮ ಮಕ್ಕಳ ಸಹಾಯವಾಣಿ ಹಾಗೂ ೧೯೩೦ ಸೈಬರ್ ಕ್ರೈಂ ಸಹಾಯವಾಣಿಗಳಿಗೆ ಸಂಪರ್ಕಿಸುವAತೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.