ಕೂಡಿಗೆ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಿಂದ ಅಣೆಕಟ್ಟೆಗೆ ಒಳ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಹೊರ ಹರಿಯುವಿಕೆಯಲ್ಲಿ ಇದೀಗ ಏರಿಕೆ ಕಂಡುಬರುತ್ತಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣವು ಹೆಚ್ಚಾಗಿ ೧೦ ಸಾವಿರ ಕ್ಯೂಸೆಕ್ಸ್ ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಅಣೆಕಟ್ಟೆಯ ಮುಖ್ಯ ಕ್ರೆಸ್ಟ್ ಗೇಟ್ ಮತ್ತು ವಿದ್ಯುತ್ ಘಟಕದ ಮೂಲಕ ನದಿಗೆ ಹರಿಸಲಾಗುತ್ತಿದೆ. ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಕಾವೇರಿ ನೀರಾವರಿ ನಿಗಮದ ಸೂಚನೆ ಅನ್ವಯ ಹಾರಂಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಅಣೆಕಟ್ಟೆಯ ಗಂಟೆ ಗಂಟೆಗೆ ಒಳ ಹರಿವಿನ ನೀರಿನ ಮಾಹಿತಿಯ ಸಂಗ್ರಹಿಸಿ ಅದರ ಅನುಗುಣವಾಗಿ ನದಿಗೆ ನೀರು ಹರಿಸಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಡಿ.ಡಿ.ಕಿರಣ್ ತಿಳಿಸಿದ್ದಾರೆ.