ಈ ನಡುವೆ ಜಿಲ್ಲೆಯ ಹಲವೆಡೆ ಬೆಳೆಗಾರರು ಮತ್ತಿತರರು ಮೋಡ ಬಿತ್ತನೆಯನ್ನು ಕೊಡಗಿನಲ್ಲಿ ನಡೆಸಬಾರದೆಂದು ಆಗ್ರಹಿಸಿದ್ದಾರೆ. ಇದರಿಂದ ಈಗಾಗಲೇ ಮಳೆಯಿಂದ ಹಾನಿಗೀಡಾಗುತ್ತಿರುವ ಕಾಫಿ, ಕರಿಮೆಣಸು ಬೆಳೆಗಳ ಫಸಲಿಗೆ ಧಕ್ಕೆಯುಂಟಾಗಲಿದೆ . ಅಂತಹ ಸಂದರ್ಭ ಬಂದರೆ ಪ್ರತಿಭಟಿಸಬೇಕಾಗುತ್ತದೆ ಎಂದು ಮುನ್ನೆಚ್ಚರಿಕೆಯಿತ್ತ್ತಿದ್ದಾರೆ. ಭಾಗಮಂಡಲದ ಕೆ.ಜೆ. ಭರತ್ ಅವರು ಈ ಕುರಿತು ಅಲ್ಲಿನ ಬೆಳೆಗಾರರು ಆತಂಕಗೊAಡಿದ್ದಾರೆ ಎಂದಿದ್ದು ಮೋಡ ಬಿತ್ತನೆ ಮಾಡದಂತೆ ಸರಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.. ಈಗಾಗಲೇ ಭಾಗಮಂಡಲಕ್ಕೆ ೧೨೭ ಇಂಚು ಮಳೆಯಾಗಿರುವುದಾಗಿ ಮಾಹಿತಿಯಿತ್ತಿದ್ದಾರೆ.

ಕೊಡಗು ಬಂದ್ : ಎಚ್ಚರಿಕೆ

ಕಾಫಿ ಹಾಗೂ ಕರಿಮೆಣಸು ಬೆಳೆಗಳು ಪ್ರಗತಿ ಕಾಣುತ್ತಿರುವ ಇಂತಹ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಸರ್ಕಾರ ಮುಂದಾದರೆೆ. ಕೊಡಗು ಬಂದ್ ಮಾಡಲಾಗುವುದು ಎಂದು ಬಿಜೆಪಿ ರೈತ ಮೋರ್ಚಾ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸೋಮವಾರಪೇಟೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್ ಅವರು, ಕೊಡಗಿನಲ್ಲಿ ೨೦೧೮ರ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಜಲಪ್ರಳಯ ಉಂಟಾಗಿ ಭೂ ಕುಸಿತಗಳು ಸಂಭವಿಸಿ ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜೀವಹಾನಿಗಳು ಸಂಭವಿಸಿದ್ದವು. ಇದೀಗ ಸರ್ಕಾರವೇ ಬಲವಂತವಾಗಿ ಮಳೆ ಸುರಿಸುವ ಪ್ರಯತ್ನ ನಡೆಸುತ್ತಿದ್ದು, ಮೋಡ ಬಿತ್ತನೆ ಮಾಡಿ, ಕೊಡಗಿನ ಕೃಷಿ ನಾಶಪಡಿಸಿ ಅನ್ಯರಾಜ್ಯದ ಉದ್ದಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ಕಾಫಿ ಹಾಗೂ ಕರಿಮೆಣಸು ಫಸಲಿಗೆ ಅಲ್ಪ ಪ್ರಮಾಣದ ಮಳೆ ಹಾಗೂ ಬಿಸಿಲಿನ ವಾತಾವರಣ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಮೋಡ ಬಿತ್ತನೆ ಮಾಡಿ ಯಥೇಚ್ಛ ಮಳೆ ಸುರಿಸಿದರೆ ಜಿಲ್ಲೆಯ ಪ್ರಮುಖ ಬೆಳೆಗಳು ಸಂಪೂರ್ಣ ನಾಶವಾಗಲಿದೆ. ಇದರೊಂದಿಗೆ ಜಲಪ್ರಳಯ, ಭೂ ಕುಸಿತದಂತಹ ಘಟನೆಗಳೂ ನಡೆಯುವ ಸಂಭವ ಹೆಚ್ಚಿದೆ ಎಂದರು.

ಒAದು ವೇಳೆ ವಿರೋಧದ ನಡುವೆಯೂ ಮೋಡ ಬಿತ್ತನೆಗೆ ಮುಂದಾಗಿ ಕೊಡಗಿನಲ್ಲಿ ನಷ್ಟ ಸಂಭವಿಸಿದರೆ ಅದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಲಿದೆ. ಜಿಲ್ಲೆಯ ಈರ್ವರು ಶಾಸಕರು ಜವಾಬ್ದಾರಿ ಹೊತ್ತು ಮೋಡ ಬಿತ್ತನೆಗೆ ವಿರೋಧ ವ್ಯಕ್ತಪಡಿಸಬೇಕು ಎಂದು ಅಭಿಮನ್ಯುಕುಮಾರ್ ಒತ್ತಾಯಿಸಿದರು. ಬಿಜೆಪಿ ಕೃಷಿ ಮೋರ್ಚಾದ ಮಂಡಲ ಅಧ್ಯಕ್ಷ ಮಚ್ಚಂಡ ಪ್ರಕಾಶ್, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರಕ್ಷಿತ್, ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ, ಜಿಲ್ಲಾ ಕಾರ್ಯದರ್ಶಿ ವಿನೋದ್ ಕೂತಿ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ದರ್ಶನ್ ಯಡೂರು ಹೋರಾಟದ ಮನ್ಸೂಚನೆಯಿತ್ತರು.

ಬೆಳೆಗಾರರ ಸಂಘದಿAದ ವಿರೋಧ

ಕೊಡಗಿನಲ್ಲಿ ಮೋಡ ಬಿತ್ತನೆಗೆ ಸರ್ಕಾರ ಮುಂದಾಗಬಾರದು ಎಂದು ಸೋಮವಾರಪೇಟೆ ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದ್ದು, ಈಗಾಗಲೇ ಫಸಲು ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದೆ. ಈ ಬಗ್ಗೆ ಸಂಘದ ಅಧ್ಯಕ್ಷ ಬಿ.ಎಂ. ಲವ ಅವರು ಹೇಳಿಕೆ ನೀಡಿದ್ದಾರೆ. ಮೋಡ ಬಿತ್ತನೆ ಮಾಡುವುದನ್ನು ಸರ್ಕಾರ ಕೈಬಿಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಕೊಡಗಿನಲ್ಲಿ ಮೋಡ ಬಿತ್ತನೆ ಮಾಡುವ ಮೊದಲು ಸರ್ಕಾರ ಎಚ್ಚರಿಕೆ ವಹಿಸಲಿ. ವೈಜ್ಞಾನಿಕ ಅಧ್ಯಯನವಿಲ್ಲದೆ ಪ್ರಯೋಗ ಬೇಡ ಎಂದು ಕೂಡಿಗೆಯ ಬಿಜೆಪಿ ಮುಖಂಡ ಭಾಸ್ಕರ್ ನಾಯಕ್ ಒತ್ತಾಯಿಸಿದರು.