ವೀರಾಜಪೇಟೆ, ಆ. ೨೪: ವೀರಾಜಪೇಟೆಯ ಮಗ್ಗುಲದಲ್ಲಿರುವ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಎಲ್‌ಎಸ್‌ಎ ಕೇರ್ಸ್ ವತಿಯಿಂದ ಆಡಳಿತ ಮಂಡಳಿ ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವೀರಾಜಪೇಟೆಯ ಪೊಲೀಸ್ ಸಿಬ್ಬಂದಿಗಳಿಗೆ ರೈನ್ ಕೋಟನ್ನು ವಿತರಿಸಲಾಯಿತು.

ವೀರಾಜಪೇಟೆ ನಗರದಲ್ಲಿ ಸ್ವಚ್ಛ ನಗರ ನಿರ್ಮಾಣಕ್ಕೆ ಪಣತೊಟ್ಟಿರುವ ಪೌರಕಾರ್ಮಿಕರಿಗೆ ಕೂಡ ರೈನ್ ಕೋಟನ್ನು ಈ ಸಂದರ್ಭ ವಿತರಿಸಲಾಯಿತು. ವಿದ್ಯಾರ್ಥಿಗಳು ಹೆಗ್ಗಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.

ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ಮುಖ್ಯಸ್ಥರಾದ ಸಮಾಜ ಸೇವಕರಾದ ಪೂಜಾ ಸಜೇಶ್ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯ ಎಲ್‌ಎಸ್‌ಎ ಕೇರ್ಸ್ ವತಿಯಿಂದ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ಇಂದು ರೈನ್ ಕೋಟ್ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮುಂಬರುವ ತಿಂಗಳುಗಳಲ್ಲಿ ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ಇತರ ಸಮಾಜ ಸೇವಾ ಸಂಸ್ಥೆಗಳಿಗೆ ಭೇಟಿ ನೀಡಿ ಅಗತ್ಯ ಸಹಾಯ ಮತ್ತು ಸೇವಾ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಕಲಿಕೆಯೊಂದಿಗೆ ಕಾಳಜಿ, ಸೇವೆಯೊಂದಿಗೆ ಸಂಸ್ಕಾರ ಎಂಬ ಮಾತಿನಂತೆ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಕಲಿಕೆ, ಸೇವೆ ಹಾಗೂ ಸಂಸ್ಕಾರವನ್ನು ಮೂಡಿಸಲು ಸಂಸ್ಥೆಯು ಎಲ್ಲಾ ರೀತಿಯಲ್ಲಿಯೂ ಪಣತೊಟ್ಟಿದೆ ಎಂದರು. ಈ ಸಂದರ್ಭ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರ ಪೂಣಚ್ಚ, ಕ್ಯಾಂಪಸ್ ನಿರ್ವಹಣೆಗಾರರಾದ ರಿಚರ್ಡ್, ಶಾಲಾ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.