ಸೋಮವಾರಪೇಟೆ, ಆ. ೨೨: ಸರ್ಕಾರವು ರಾಜ್ಯದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ನೋಂದಾವಣೆ ಮಾಡಲು ಮುಂದಾಗಿದ್ದು, ರಾಜ್ಯದ ಉಳಿದೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದರೂ, ಕೊಡಗು ಜಿಲ್ಲೆಯಲ್ಲಿ ಸೂಕ್ತ ಸ್ಪಂದನ ಸಿಗದೆ, ನೋಂದಣಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಆನಂದ್ ಪ್ರಕಾಶ್ ಮೀನ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ್ ಜೋಡೋ ಯುವ ಸಂಘ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೧೬ ರಿಂದ ೩೫ ವಯೋಮಾನದ ಯುವ ಜನರನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ. ಈ ಸಂಘಕ್ಕೆ ವಿವಿಧ ಚಟುವಟಿಕೆಗಳಿಗೆ ರೂ. ೧೦ ಲಕ್ಷದವರೆಗೆ ಅನುದಾನ ನೀಡಲಾಗುವುದು. ಸಂಘದ ಸದಸ್ಯರು ಒಂದು ಆಡಳಿತ ಮಂಡಳಿಯನ್ನು ರಚಿಸಿಕೊಂಡು ವಿವಿಧ ಚಟುವಟಿಕೆಗಳೊಂದಿಗೆ ಪಂಚಾಯಿತಿ ಅಭಿವೃದ್ಧಿಗೆ ಕೈಜೋಡಿಸಬೇಕಿದೆ. ಈ ಸಂಘಕ್ಕೆ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸದಸ್ಯರನ್ನು ನೋಂದಾವಣೆ ಮಾಡಬೇಕೆಂದು ಮನವಿ ಮಾಡಿದರು.
ತಾಲೂಕು ಆಹಾರ ಇಲಾಖೆಯ ಆಹಾರ ನಿರೀಕ್ಷಕಿ ಯಶಸ್ವಿನಿ ಮಾತನಾಡಿ, ಬಿಪಿಎಲ್ ಕಾರ್ಡುದಾರರು ಪ್ರತಿ ೫ ವರ್ಷಗಳಿಗೊಮ್ಮೆ ತಮ್ಮ ಕಾರ್ಡಿನ ಈಕೆವೈಸಿ ತಪ್ಪದೆ ಮಾಡಿಸಬೇಕು. ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಈಕೆವೈಸಿ ನಡೆಯುತ್ತಿದೆ. ಇದರಿಂದ ಹೊರಗುಳಿದರೆ ಮುಂದಿನ ದಿನಗಳಲ್ಲಿ ಪಡಿತರ ಸ್ಥಗಿತಗೊಳ್ಳಲಿದೆ ಎಂದು ಸಭೆಗೆ ತಿಳಿಸಿದರು.
ಬಿಪಿಎಲ್ ಪಡಿತರ ಚೀಟಿಗಳನ್ನು ಉಳ್ಳವರು ಪಡೆದುಕೊಂಡಿದ್ದಾರೆ. ಬಡವರ ಕಾರ್ಡ್ ಎಪಿಎಲ್ ಕಾರ್ಡ್ಗಳಾಗಿ ಬದಲಾಗುತ್ತಿದೆ. ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶನಿವಾರಸಂತೆಯ ಅಬ್ಬಾಸ್ ಸಭೆಯ ಗಮನಕ್ಕೆ ತಂದರು.
ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ ೬ ರಿಂದ ರಾತ್ರಿ ೧೦ ರವರೆಗೆ ಪಡಿತರ ವಿತರಿಸಬೇಕು. ನ್ಯಾಯ ಬೆಲೆ ಅಂಗಡಿಗಳಲ್ಲಿ ಮಾಹಿತಿ ಫಲಕಗಳನ್ನು ಹಾಕಬೇಕು. ಆದರೆ, ಇದಾವುದನ್ನೂ ನ್ಯಾಯಬೆಲೆ ಅಂಗಡಿಯವರು ಪಾಲಿಸುತ್ತಿಲ್ಲ. ಶನಿವಾರಸಂತೆ ವ್ಯಾಪ್ತಿಯಲ್ಲಿ ಗ್ರಾಹಕರೊಂದಿಗೆ ಅಂಗಡಿಯವರು ಅಸಹಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸದಸ್ಯ ರಂಗಸ್ವಾಮಿ ಸಭೆಗೆ ತಿಳಿಸಿದರು. ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು.
ಗಣಗೂರು ಗ್ರಾಮದ ಅಂಗನವಾಡಿಯಲ್ಲಿ ಬಾಣಂತಿಯರಿಗೆ ಅವಧಿ ಮೀರಿದ ಆಹಾರ ಪದಾರ್ಥ ಮತ್ತು ಹುಳು ಹಿಡಿದ ಅಕ್ಕಿಯನ್ನು ನೀಡುತ್ತಿರುವುದು ಪತ್ರಿಕೆಗಳಲ್ಲಿ ಬಂದಿದೆ. ಕೂಡಲೇ ಸೂಕ್ತ ತನಿಖೆ ಮಾಡಿ, ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಎಸ್.ಎಂ. ಡಿಸಿಲ್ವ ಸಭೆಗೆ ತಿಳಿಸಿದರು.
ಅಂಗನವಾಡಿಗಳಲ್ಲಿ ಅವಧಿ ಮೀರಿದ ಕೊಳೆತ ಮೊಟ್ಟೆ ವಿತರಿಸುತ್ತಿರುವುದಾಗಿ ಶೀಲಾ ಡಿಸೋಜಾ ತಿಳಿಸಿದರು. ಈ ಸಂದರ್ಭ ಅಧ್ಯಕ್ಷರು ಮಾತನಾಡಿ, ಕಳಪೆ ಆಹಾರ ಸರಬರಾಜು ಮಾಡುತ್ತಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕಿ ಶೃತಿ ಅವರಿಗೆ ನಿರ್ದೇಶನ ನೀಡಿದರು.
ಮುಂದಿನ ವಾರದಲ್ಲಿ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ಕುಮಾರ್, ಸೆಸ್ಕ್ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಇಲಾಖಾಧಿಕಾರಿ ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳು ಉಪಸ್ಥಿತರಿದ್ದು, ತಮ್ಮ ಇಲಾಖೆಯ ಮಾಹಿತಿ ನೀಡಿದರು.