- ಚಂದ್ರಮೋಹನ್ ಎಂ.ಎನ್.
ಕುಶಾಲನಗರ, ಆ. ೨೨: ರಜತ, ಸುವರ್ಣ ಮತ್ತು ವಜ್ರ ಮಹೋತ್ಸವ ಅಲ್ಲದೆ ಶತಮಾನೋತ್ಸವ ಆಚರಣೆಗಳಿಂದ ವಂಚಿತವಾಗಿರುವ, ಅಂದಾಜು ೧೯೦ ವರ್ಷಗಳ ಇತಿಹಾಸವಿರುವ ಕೊಡಗು ಜಿಲ್ಲೆಯ ಪ್ರಪ್ರಥಮ ಕನ್ನಡ ಶಾಲೆ ಎನಿಸಿರುವ ಕುಶಾಲನಗರ ಪಟ್ಟಣದ ಹಳೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ನಿರ್ವಹಣೆಯ ಕೊರತೆಯಿಂದ ಅಪಾಯದ ಅಂಚಿನಲ್ಲಿರುವುದನ್ನು ಗಮನಿಸಬಹುದು.
ಬ್ರಿಟಿಷರ ಕಾಲದಲ್ಲಿ ಆರಂಭಗೊAಡ ಈ ಶಾಲೆ ಪ್ರಪ್ರಥಮವಾಗಿ ಪಟ್ಟಣದ ಬೀದಿಗಳ ಕೆಲವು ಕಟ್ಟಡಗಳಲ್ಲಿ ನಡೆದು, ನಂತರ ೧೯೪೯ ರಲ್ಲಿ ಅಂದಿನ ಫ್ರೇಜರ್‌ಪೇಟೆ ಸ್ಕೂಲ್ ಎಕ್ಸೆ÷್ಟಂಶನ್‌ನಲ್ಲಿ ಆಗಿನ ಕೂರ್ಗ್ ಚೀಫ್ ಕಮಿಷನರ್ ಆಗಿದ್ದ ದಿವಾನ್ ಬಹದ್ದೂರ್ ಸಿ.ಟಿ. ಮೊದಲಿಯಾರ್ ಶಂಕುಸ್ಥಾಪನೆ ಮಾಡಿದ ಈ ಸರಕಾರಿ ಶಾಲೆಯ ಕಟ್ಟಡದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಸಮಾಜದಲ್ಲಿ ಹಲವು ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದನ್ನು ನೆನಪಿಸಿಕೊಳ್ಳಬಹುದು.
ಆದರೆ ಈ ಸರಕಾರಿ ಶಾಲೆ ಮಾತ್ರ ಇನ್ನೂ ಶಿಥಿಲಗೊಂಡಿರುವ ಹೆಂಚಿನ ಕಟ್ಟಡಗಳ ಭೂತ ಬಂಗಲೆಯAತೆ ಗೋಚರಿಸುತ್ತಿದೆ. ಪ್ರಸಕ್ತ ಇರುವ ಶಾಲಾ ಕಟ್ಟಡಗಳು ಹಲವು ದಶಕಗಳನ್ನು ದಾಟಿ ಶತಮಾನವನ್ನು ಪೂರೈಸಲು ಸಮೀಪವಿದ್ದು ಇದುವರೆಗೂ ರಜತ, ಸುವರ್ಣ ಮಹೋತ್ಸವ ಅಥವಾ ಅಮೃತ ಮಹೋತ್ಸವವನ್ನು ಕಾಣಲೆ ಇಲ್ಲ.
ಈ ಶಾಲೆಯ ಹಳೆಯ ಕಟ್ಟಡಗಳ ನಿರ್ವಹಣೆ, ಅಭಿವೃದ್ಧಿ ಮಾತ್ರ ಬಹುತೇಕ ಶೂನ್ಯ ಎನ್ನಬಹುದು. ಆವರಣದಲ್ಲಿ ಕೆಲವು ಕಟ್ಟಡಗಳು ತಲೆಯೆತ್ತಿ ನಿಂತಿದ್ದು ಮಾತ್ರ ಕಾಣಬಹುದು.
ಒಂದು ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಈ ಶಾಲಾ ಆವರಣದಲ್ಲಿ ಪ್ರಸಕ್ತ ಎಲ್‌ಕೆಜಿ ಇಂದ ೭ನೇ ತರಗತಿ ತನಕ ೧೮೫ ವಿದ್ಯಾರ್ಥಿಗಳು ಮತ್ತು ಮೌಲಾನ ಅಜಾದ್ ಶಾಲೆಯಲ್ಲಿ ಆರರಿಂದ ಹತ್ತರ ತನಕ ಸುಮಾರು ೨೨೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಇದೇ ಆವರಣದಲ್ಲಿ ಬಾಲಕಿಯರ ಸರಕಾರಿ ಪ್ರೌಢಶಾಲೆ ಕೂಡ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ೧೦೫ ಮಕ್ಕಳು ಎಂಟರಿAದ ೧೦ನೇ ತರಗತಿ ತನಕ ಪಾಠ ಪ್ರವಚನದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ಕಾಲದಲ್ಲಿ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾರ್ಜನೆಗೆ ದಾಖಲಾಗುತ್ತಿದ್ದರು ಎನ್ನುವ ನೆನಪು ಮಾತ್ರ ಇಲ್ಲಿನ ಎಲ್ಲಾ ಹಿರಿಯರಿಗೆ ಇದೆ.
ಸುಮಾರು ೪.೫ ಎಕರೆ ವಿಸ್ತೀರ್ಣದ ಪ್ರದೇಶ ವ್ಯಾಪ್ತಿಯಲ್ಲಿರುವ ಈ ಶಾಲೆ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿದ್ದು ಕ್ರೀಡೆ ಮತ್ತಿತರ ಸಾಮಾಜಿಕ ಚಟುವಟಿಕೆಗಳು ಈ ಶಾಲಾ ಆವರಣದಲ್ಲಿ ನಿರಂತರವಾಗಿ ನಡೆಯುತ್ತಿರುವುದನ್ನು ಗಮನಿಸಬಹುದು.
ಬಹುತೇಕ ಬಡ ಕುಟುಂಬದ ಮಕ್ಕಳು ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲೆಗೆ ೨೦೧೯ ರಲ್ಲಿ ಸ್ಥಳೀಯ ರೋಟರಿ ಸಂಸ್ಥೆ ಲಕ್ಷಾಂತರ ವೆಚ್ಚದಲ್ಲಿ ಕುಡಿಯುವ ನೀರು ಶುದ್ಧೀಕರಣ ಘಟಕವೊಂದನ್ನು ನಿರ್ಮಿಸಿಕೊಟ್ಟಿದ್ದು ಅದು ಕೂಡ ನಿರ್ವಹಣೆ ಕೊರತೆಯಿಂದ ದುಸ್ಥಿತಿಯಲ್ಲಿದೆ.
ಮೇಲ್ಭಾಗದ ಹೆಂಚುಗಳು ಕುಸಿದು ನಿಂತಿದ್ದು ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡAತೆ ಕಂಡು ಬರುತ್ತಿಲ್ಲ. ಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಬೇಕಾದರೆ ಇರುವ ಒಂದೇ ಒಂದು ಸಭಾಂಗಣ ಕಟ್ಟಡ ಕಳೆದ ಹಲವು ವರ್ಷಗಳಿಂದ ಶಿಥಿಲಗೊಂಡು ಕುಸಿದು ಬೀಳುವ ಹಂತದಲ್ಲಿ ಕಾಣಬಹುದು.
ಇದೀಗ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಈ ಕಟ್ಟಡವನ್ನು ತೆರವುಗೊಳಿಸಲು ಸರ್ಕಾರದಿಂದ ಅನುಮತಿ ಪಡೆದಿದ್ದು ಸುಮಾರು ಎಂಟು ಕೋಟಿ ವೆಚ್ಚದಲ್ಲಿ ಬೃಹತ್ ಸಮುದಾಯ ಭವನ ನಿರ್ಮಾಣದ ಚಿಂತನೆ ಇದೆ.
ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ವಿ.ಪಿ. ಶಶಿಧರ್ ನೇತೃತ್ವದಲ್ಲಿ ಸಮಿತಿ ಸದಸ್ಯರು ನೀಲಿ ನಕ್ಷೆ ರೂಪಿಸಿದ್ದು ಮುಂದಿನ ದಿನಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.
ಪಿಎಂಶ್ರೀ ಹೆಸರಿನಲ್ಲಿರುವ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬಿಡುಗಡೆ ಆಗದಿರುವುದು ಶಿಕ್ಷಣ ಸಂಸ್ಥೆಯ ಕಟ್ಟಡಗಳ ಅಭಿವೃದ್ಧಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ಸ್ಥಳೀಯರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಂದನ್ ಕುಮಾರ್ ನೇತೃತ್ವದಲ್ಲಿ ಶಾಲೆಗೆ ಆದಷ್ಟು ದಾನಿಗಳ ಸಹಕಾರದೊಂದಿಗೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಖಾಸಗಿ ಶಾಲೆಗೆ ಪೈಪೋಟಿ ನೀಡುವಂತಹ ಪ್ರಯತ್ನ ಸಾಗಿದರೂ ಅಕ್ಕಪಕ್ಕದಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳ ಶೈಲಿಯ ಸೆಳೆತಕ್ಕೆ ವಿದ್ಯಾರ್ಥಿಗಳ ಪೋಷಕರು ಮಾರು ಹೋಗುತ್ತಿರುವುದು ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತವಾಗಲು ಕಾರಣವಾಗುತ್ತಿದೆ.
ಶಾಲೆಗೆ ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗಿದ್ದು, ಸ್ಥಳೀಯ ಕಾವೇರಿ ಪರಿಸರ ಸಂರಕ್ಷಣಾ ಬಳಗದ ಮೂಲಕ ಸುತ್ತಲೂ ಮರ ಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ಏನೇ ಸಮಸ್ಯೆ ಇದ್ದರೂ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರ ತಂಡ ಶಾಲಾ ಅಭಿವೃದ್ಧಿ ಸಮಿತಿಯೊಂದಿಗೆ ಸೇರಿ ಲಭ್ಯವಿರುವ ಅಲ್ಪಸ್ವಲ್ಪ ಸೌಲಭ್ಯದೊಂದಿಗೆ ಹಲವು ಕೊರತೆಗಳ ನಡುವೆಯೂ ಶಾಲೆಯ ಮಕ್ಕಳು ಮಾತ್ರ ಉತ್ತಮ ಫಲಿತಾಂಶ ಗಳಿಸುತ್ತಿರುವುದು ಶ್ಲಾಘನೀಯ ಅಂಶ.
ಪಟ್ಟಣದ ಹೃದಯ ಭಾಗದಲ್ಲಿರುವ ಕಾರಣ ಇಲ್ಲಿ ಸಂಜೆಯಾಗುತ್ತಲೇ ಪುಂಡಪೋಕರಿಗಳ, ಕುಡುಕರ ಹಾವಳಿ ಅಧಿಕವಾಗುತ್ತಿದ್ದು ಇವರ ನಿಯಂತ್ರಣ ಮಾಡುವಲ್ಲಿ ಶಾಲೆಯ ಅಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವರ್ಗ ವಿಫಲವಾಗುತ್ತಿದೆ.
ತಕ್ಷಣ ಈ ಐತಿಹಾಸಿಕ ಪುರಾತನ ಶಾಲೆಯ ಬಗ್ಗೆ ಸರಕಾರ ಮತ್ತು ಶಿಕ್ಷಣ ಇಲಾಖೆ ವಿಶೇಷ ಗಮನ ಹರಿಸಿ ಶಾಲೆಯ ಕಟ್ಟಡಗಳ ಅಭಿವೃದ್ಧಿ ಯೋಜನೆ ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಬೇಕಾಗಿದೆ.