ನೆದರ್ಲ್ಯಾಂಡ್, ಆ. ೧೮: ನೆದರ್ಲ್ಯಾಂಡ್ ಹಾಗೂ ಬೆಲ್ಜಿಯಮ್‌ನಲ್ಲಿ ನಡೆಯುತ್ತಿರುವ ೧೬ನೇ ಆವೃತ್ತಿಯ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳೆಯರ ತಂಡವು ಗುಂಪು ಹಂತದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ೬-೧ ಭರ್ಜರಿ ಗೆಲುವು ಸಾಧಿಸಿ ಗುಂಪು ಡಿ ನಲ್ಲಿ ೨ನೇ ಸ್ಥಾನದಲ್ಲಿದೆ. ಮೊದಲ ಪಂದ್ಯವನ್ನು ಚೀನಾದೊಂದಿಗೆ ಡ್ರಾ ಮಾಡಿಕೊಂಡಿದ್ದ ಭಾರತ ೩ನೇ ಪಂದ್ಯವನ್ನು ಇಂಗ್ಲೆAಡ್ ವಿರುದ್ಧ ಆಡಲಿದ್ದು, ಮುಂದಿನ ಸುತ್ತು ಪ್ರವೇಶಕ್ಕೆ ಗೆಲುವು ಅಥವಾ ಡ್ರಾ ಮಾಡಿಕೊಳ್ಳುವ ಅಗತ್ಯವಿದೆ. ಈ ಗುಂಪಿನಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದು, ಭಾರತ ೨ನೇ ಸ್ಥಾನದಲ್ಲಿದೆ. ಇತರ ಗುಂಪುಗಳಲ್ಲಿ ನೆದರ್ಲ್ಯಾಂಡ್ ಹಾಗೂ ಜಪಾನ್, ಅರ್ಜೆಂಟೀನಾ ಹಾಗೂ ಯು.ಎಸ್.ಎ, ಬೆಲ್ಜಿಯಮ್ ಹಾಗೂ ಸ್ಪೇನ್ ತಂಡಗಳು ಮೊದಲೆರಡು ಸ್ಥಾನಗಳನ್ನು ಪಡೆದಿದ್ದು, ೨ನೇ ಸುತ್ತಿಗೆ ಪ್ರವೇಶ ಪಡೆಯಲು ಸಂಭಾವ್ಯ ಪಟ್ಟಿಯಲ್ಲಿವೆ.

ಪುರುಷರ ಪಂದ್ಯ- ಇಂದು ಭಾರತ ಹಾಗೂ ಪಾಕ್

ಪುರುಷರ ಪಂದ್ಯಾವಳಿಯ ಗುಂಪು ಹಂತದಲ್ಲಿ ಭಾರತವು ಪಾಕಿಸ್ತಾನವನ್ನು ಇಂದು ಎದುರಿಸಲಿದೆ. ಭಾರತ ಮತ್ತು ಪಾಕಿಸ್ತಾನ ೧೮೪ನೇ ಬಾರಿಗೆ ಅಂತರರಾಷ್ಟ್ರೀಯ ಹಾಕಿಯಲ್ಲಿ ತಾ. ೧೯ ರಂದು (ಇಂದು) ಮುಖಾಮುಖಿಯಾಗಲಿವೆ.

ಗ್ರೂಪ್-ಡಿ ನಲ್ಲಿ ಇರುವ ಈ ಎರಡು ತಂಡಗಳು ಪ್ರಸ್ತುತ ೨ ಹಾಗೂ ೩ನೇ ಸ್ಥಾನದಲ್ಲಿವೆ. ಇಂಗ್ಲೆAಡ್, ಪಾಕಿಸ್ತಾನ ಹಾಗೂ ಭಾರತವನ್ನು ಮಣಿಸಿ ಗುಂಪು ಡಿ ನಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತವು ವೇಲ್ಸ್ ಅನ್ನು ೩-೧ ಗೋಲುಗಳಿಂದ ಸೋಲಿಸಿ, ಇಂಗ್ಲೆAಡ್ ವಿರುದ್ಧ ೪-೨ ಸೋತು ೨ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಇಂಗ್ಲೆAಡ್ ವಿರುದ್ಧ ಸೋತು ವೇಲ್ಸ್ ನೊಂದಿಗೆ ಡ್ರಾ ಮಾಡಿಕೊಂಡು ೩ನೇ ಸ್ಥಾನದಲ್ಲಿದೆ. ವೇಲ್ಸ್ ೪ನೇ ಸ್ಥಾನದಲ್ಲಿದೆ.

ಇತರ ೩ ಗುಂಪುಗಳ ಪೈಕಿ ಗುಂಪು-ಎ ನಲ್ಲಿ ನೆದರ್ಲ್ಯಾಂಡ್, ಅರ್ಜೆಂಟಿನಾ ಮೊದಲೆರಡು ಸ್ಥಾನಗಳಲ್ಲಿವೆ. ಬಿ ನಲ್ಲಿ ಜರ್ಮನಿ, ಬೆಲ್ಜಿಯಮ್, ಸಿ ನಲ್ಲಿ ಆಸ್ಟ್ರೇಲಿಯಾ, ಸ್ಪೇನ್ ದೇಶಗಳು ಸ್ಥಾನ ಪಡೆದಿದ್ದು, ಪ್ರಸ್ತುತ ಸ್ಥಾನಗಳ ಆಧಾರದಲ್ಲಿ ೨ನೇ ಹಂತ ಪ್ರವೇಶಿಸಲಿವೆ. ಭಾರತವು ಪಾಕಿಸ್ತಾನದೊಂದಿಗೆ ಗೆದ್ದರೆ ೨ನೇ ಸುತ್ತಿಗೆ ಖಚಿತವಾಗಿ ಪ್ರವೇಶ ಪಡೆಯಲಿದೆ. ಪಂದ್ಯವು ತಾ. ೧೯ ರಂದು (ಇಂದು) ಸಂಜೆ ೬:೩೦ಕ್ಕೆ ನಡೆಯಲಿದೆ.