ಸಿದ್ದಾಪುರ, ಆ. ೧೮; ಮಾನವನ ಮೇಲೆ ದಾಳಿ ನಡೆಸುತ್ತಿದ್ದ ಕಾಡಾನೆಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸಿದರು. ಆದರೆ ಇಲಾಖೆ ಗುರುತಿಸಿದ ಕಾಡಾನೆ ತಪ್ಪಿಸಿಕೊಂಡು ಓಡಿಹೋದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಫಲಗೊಂಡಿತು.
ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಅಮ್ಮತ್ತಿ ಶಾಖೆ ವ್ಯಾಪ್ತಿಗೆ ಒಳಪಡುವ ಬೈರಂಬಾಡ, ಯಡೂರು, ಕಣ್ಣಂಗಾಲ ಹಚ್ಚಿನಾಡು ಗ್ರಾಮದಲ್ಲಿ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಇತ್ತೀಚೆಗೆ ಯಡೂರು ಗ್ರಾಮದಲ್ಲಿ ಹಾಡಹಗಲೇ ಕಾರ್ಮಿಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಾಡಾನೆಯನ್ನು ಸೆರೆ ಹಿಡಿಯಬೇಕೆಂದು ಅಮ್ಮತ್ತಿ ಒಂಟಿ ಯಂಗಡಿಯ ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರತಿಭಟನಾಕಾರರಿಗೆ ಕಾಡಾನೆ ಸೆರೆ ಹಿಡಿಯುವ ಭರವಸೆ ನೀಡಿದ್ದರಲ್ಲದೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರೂ ಕೂಡ ಸರಕಾರದ ಗಮನಕ್ಕೆ ತಂದು ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಹಾಗಾಗಿ ಅಮ್ಮತ್ತಿ -ಕಣ್ಣಂಗಾಲ ಸುತ್ತಮುತ್ತಲಿನ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ ೧೦ ಗಂಟೆಗೆ ಸಾಕಾನೆಗಳಾದ ಲಕ್ಷö್ಮಣ, ಈಶ್ವರ, ಧನಂಜಯ, ಸುಗ್ರೀವ, ಅಜೇಯ ಈ ೫ ಸಾಕಾನೆಗಳ ನೆರವಿನಿಂದ ಅಮ್ಮತ್ತಿ ಪ್ರೌಢಶಾಲೆ ಸಮೀಪದ ಕಾಫಿ ತೋಟದಿಂದ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಕಾರ್ಯಾಚರಣೆ ನಡೆಸುವ ಸಂದರ್ಭ ಆನೆ ಪತ್ತೆಯಾಯಿತು. ಕಾರ್ಯಾಚರಣೆ ತಂಡ ಕೂಡಲೇ ಕಾರ್ಯಪ್ರವೃತ್ತರಾದರಾದರೂ ಆನೆಯು ಅಲ್ಲಿಂದ ತಪ್ಪಿಸಿಕೊಂಡಿತು. ಆದರೂ ಛಲ ಬಿಡದ ತಂಡವು ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಸಿದರೂ ಕೂಡ ಕಾಡಾನೆ ಸೆರೆ ಆಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಫಲಗೊಂಡಿತು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ, ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನುತಾ ಚೌಹಾಣ್ ಮಾರ್ಗದರ್ಶನದಲ್ಲಿ ಎ.ಸಿ.ಎಫ್.ತಹಸೀನ ಬಾನು, ವಲಯ ಅರಣ್ಯ ಅಧಿಕಾರಿ ಶಿವರಾಮ್, ವನ್ಯಜೀವಿ ವೈದ್ಯಾಧಿಕಾರಿಗಳಾದ ಡಾ. ಮುಜೀಬ್ ಮತ್ತು ಡಾ. ಆದರ್ಶ್ ಸೇರಿದಂತೆ ೫೦ಕ್ಕೂ ಅಧಿಕ ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ : ವಾಸು