ಗೋಣಿಕೊಪ್ಪಲು. ಆ. ೧೬: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆಗಳ ಉಪಟಳ ಹಾಗೂ ವನ್ಯಜೀವಿಗಳ ಹಾವಳಿಯಿಂದ ರೈತರು, ಕಾರ್ಮಿಕರು ಹಾಗೂ ಗ್ರಾಮೀಣ ಜನರು ಇಂದು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಸಮಸ್ಯೆ ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸುವಂತೆ ಬಿಜೆಪಿ ರೈತ ಮೋರ್ಚಾ ಆಕ್ರೋಶ ವ್ಯಕ್ತಪಡಿಸಿದೆ.

ಕಾಡಾನೆಗಳ ದಾಳಿಗೆ ಮನುಷ್ಯರ ಪ್ರಾಣ ಹಾನಿಯಾಗುತ್ತಿದೆ. ಹುಲಿ, ಚಿರತೆಗಳ ದಾಳಿಗೆ ಸಾಕುಪ್ರಾಣಿಗಳು ಬಲಿಯಾಗುತ್ತಿವೆ. ರೈತರು ಬೆಳೆದ ಬೆಳೆಗಳು ಕ್ಷಣಾರ್ಧದಲ್ಲಿ ನಾಶವಾಗಿ, ಅನ್ನದಾತನ ಬದುಕು ಬೀದಿಗೆ ಬಿದ್ದಿದೆ. ಈ ಸಮಸ್ಯೆ ಇಂದಿನದಲ್ಲ, ವರ್ಷಗಳಿಂದ ಕೊಡಗಿನ ಜನರು ಇದೇ ಗೋಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಪ್ರತಿಬಾರಿ ಕೇವಲ ಪರಿಹಾರದ ಭರವಸೆ ನೀಡಿ ಕೈತೊಳೆದುಕೊಳ್ಳುತ್ತಿವೆ. ಬಾಯಿ ಮಾತಿನ ಪರಿಹಾರ ನಮಗೆ ಬೇಡ! ಜನರ ಜೀವ ಮತ್ತು ರೈತರ ಬದುಕನ್ನು ರಕ್ಷಿಸುವ ಶಾಶ್ವತ ಪರಿಹಾರ ನಮಗೆ ಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷರಾದ ಅಮ್ಮುಣಿಚಂಡ ರಂಜಿ ಪೂಣಚ್ಚ ಪತ್ರಿಗೋಷ್ಠಿಯಲ್ಲಿ ಆಗ್ರಹಿಸಿದರು.

ವನ್ಯಜೀವಿ - ಮಾನವ ಸಂಘರ್ಷವನ್ನು ನಿಯಂತ್ರಿಸಲು ಸರ್ಕಾರ ತಕ್ಷಣವೇ ವೈಜ್ಞಾನಿಕ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯವಾಗಿದೆ. ಕಾಡಾನೆಗಳ ಚಲನವಲನವನ್ನು ನಿರಂತರವಾಗಿ ಗಮನಿಸಲು ಸೂಕ್ತ ತಾಂತ್ರಿಕ ವ್ಯವಸ್ಥೆ ಮಾಡಬೇಕು.ಅಗತ್ಯವಿರುವ ಕಡೆಗಳಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಸೌರ ಬೇಲಿಗಳನ್ನು ತುರ್ತಾಗಿ ನಿರ್ಮಿಸಬೇಕು. ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಅಲ್ಲಿ ವಿಶೇಷ ಅರಣ್ಯ ಸಿಬ್ಬಂದಿ ಹಾಗೂ ತುರ್ತು ಕಾರ್ಯಪಡೆಯನ್ನು ನಿಯೋಜಿಸಬೇಕು.

ಆನೆ ದಾಳಿಗೆ ಅಥವಾ ಇತ್ತೀಚಿನ ವನ್ಯಜೀವಿಗಳ ದಾಳಿಗೆ ಬಲಿಯಾದ ಕುಟುಂಬಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ. ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಸರಳಗೊಳಿಸಿ, ಯಾವುದೇ ವಿಳಂಬವಿಲ್ಲದೆ ನೇರವಾಗಿ ರೈತರ ಖಾತೆಗೆ ಹಣ ಜಮೆಯಾಗುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಕೊಡಗಿನ ಜನರು ಇನ್ನು ಕೇವಲ ಭರವಸೆಗಳನ್ನು ಕೇಳುವ ಸ್ಥಿತಿಯಲ್ಲಿಲ್ಲ. ಆನೆ ಉಪಟಳ ಮತ್ತು ವನ್ಯಜೀವಿ ಹಾವಳಿಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಯಾವಾಗ ಕಾರ್ಯಪ್ರವೃತ್ತವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷರಾದ ಚೋಡುಮಾಡ ದಿನೇಶ್, ಕಾರ್ಯದರ್ಶಿ ಆಲೆಮಾಡ ಸುಧೀರ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಪಂದಿಮಾಡ ರಮೇಶ್, ಕುಪ್ಪಂಡ ಮೋಹನ್, ಕುಪ್ಪಂಡ ದಿಲನ್ ಬೋಪಣ್ಣ, ವೀರಾಜಪೇಟೆ ರೈತ ಮೋರ್ಚಾದ ಮಂಡಲ ಅಧ್ಯಕ್ಷ ಗುಡ್ಡಮಾಡ ಅಪ್ಪಿ ಸುಬ್ರಮಣಿ, ಕೊಂಗಣ ಗ್ರಾಮದ ಕಾಫಿ ಬೆಳೆಗಾರರಾದ ತಿತಿಮಾಡ ಲಾಲಾ ಭೀಮಯ್ಯ ಉಪಸ್ಥಿತರಿದ್ದರು.