ಮಡಿಕೇರಿ, ಆ. ೧೬: “ಗುಣಮಟ್ಟದ ಗಿಡಗಳ ಉತ್ಪಾದನೆ ಹಾಗೂ ಸುಸ್ಥಿರ ಕೃಷಿ” ಎಂಬ ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಅಪ್ಪಂಗಳದ ಐ.ಸಿ.ಎ.ಆರ್ - ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯ ಪ್ರಾದೇಶಿಕ ಕೇಂದ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಕಾಫಿ ಮಂಡಳಿ ಉಪ ನಿರ್ದೇಶಕ ವೆಂಕಟ ರೆಡ್ಡಿ ಉದ್ಘಾಟಿಸಿ ಮಾತನಾಡಿ, ಹೆಚ್ಚಿನ ಆದಾಯವನ್ನು ಪಡೆಯಲು ವೈಜ್ಞಾನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ಇಂತಹ ತರಬೇತಿ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಂಡು, ತರಬೇತಿಯಲ್ಲಿ ತಿಳಿಸಿಕೊಡಲಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಿದರು.

ಕೇಂದ್ರದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ. ಜಿ.ಎ. ರಾಜಣ್ಣ, ಮಾತನಾಡಿ, ಭಾರತದಿಂದ ಸಂಬಾರ ಬೆಳೆಗಳ ರಫ್ತಿನ ಬಗ್ಗೆ ಕಿರುಪರಿಚಯವನ್ನು ನೀಡಿದರು. ಸುಧಾರಿತ ತಳಿಗಳ ಅಳವಡಿಕೆ, ಮಣ್ಣು ಪರೀಕ್ಷೆ, ಪೋಷಕಾಂಶಗಳ ನಿರ್ವಹಣೆ, ಕೀಟ ಮತ್ತು ರೋಗಗಳ ನಿರ್ವಹಣೆ ಹಾಗೂ ಸಂಬಾರ ಪದಾರ್ಥಗಳ ಸಂಸ್ಕರಣೆಯ ಮಹತ್ವವನ್ನು ತಿಳಿಸಿದರು.

ತಾಂತ್ರಿಕ ಅಧಿವೇಶನದಲ್ಲಿ ಐಸಿಎಆರ್-ಐಐಎಸ್‌ಆರ್ ವಿಜ್ಞಾನಿಗಳು ವಿವಿಧ ವಿಷಯಗಳ ಕುರಿತು ಉಪನ್ಯಾಸಗಳನ್ನು ನೀಡಿದರು. ಹಿರಿಯ ವಿಜ್ಞಾನಿ ಡಾ. ಶಿವಕುಮಾರ್ ಎಂ. ಎಸ್. ಅವರು ಕಾಳುಮೆಣಸು ಮತ್ತು ಏಲಕ್ಕಿಯ ಸುಧಾರಿತ ತಳಿಗಳ ಕುರಿತು ಮಾತನಾಡಿದರು. ಹಿರಿಯ ವಿಜ್ಞಾನಿ ಡಾ. ಹೊನ್ನಪ್ಪ ಆಸಂಗಿ ಅವರು ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ನರ್ಸರಿ ನಿರ್ವಹಣೆ ಹಾಗೂ ಗುಣಮಟ್ಟದ ಸಸ್ಯಾಭಿವೃದ್ದಿ ವಿಧಾನಗಳ ಕುರಿತು ವಿವರಿಸಿದರು. ಪ್ರಧಾನ ವಿಜ್ಞಾನಿ ಡಾ. ಎಸ್. ಜೆ. ಅಂಕೇಗೌಡ ಅವರು ಕಾಳುಮೆಣಸು ಮತ್ತು ಏಲಕ್ಕಿಯ ಸುಸ್ಥಿರ ಕೃಷಿ ಪದ್ಧತಿಗಳ ಕುರಿತು ಉಪನ್ಯಾಸ ನೀಡಿದರು.

ಕಾಳುಮೆಣಸು ಮತ್ತು ಏಲಕ್ಕಿಯಲ್ಲಿ ಸಮಗ್ರ ಕೀಟ ಹಾಗೂ ರೋಗ ನಿರ್ವಹಣೆಯ ಕುರಿತು ಕೋಜಿಕೋಡು ಕೇಂದ್ರದ ಪ್ರಧಾನ ವಿಜ್ಞಾನಿ ಡಾ. ಬಿಜು ಸಿ.ಎನ್ ಉಪನ್ಯಾಸ ನೀಡಿದರು.

ಹಿರಿಯ ವಿಜ್ಞಾನಿಗಳಾದ ಡಾ. ಅಕ್ಷಿತ ಹೆಚ್. ಜೆ ಸ್ವಾಗತಿಸಿದರು., ವಿಜ್ಞಾನಿಗಳಾದ ಡಾ. ಗಾಯತ್ರಿ ಜಿ.ಎನ್ ವಂದಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಕೊಡಗು, ದಕ್ಷಿಣ ಕನ್ನಡ, ಮೈಸೂರು, ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಒಟ್ಟು ೧೦೫ ರೈತರು ಭಾಗವಹಿಸಿದ್ದರು.