ವೀರಾಜಪೇಟೆ, ಆ. ೧೬: ಗ್ರಂಥಾಲಯಗಳು ನಮ್ಮ ಜ್ಞಾನವನ್ನು ವೃದ್ಧಿಸುದಷ್ಟೇ ಅಲ್ಲ, ಹೊಸ ವಿಚಾರಗಳನ್ನು ತಿಳಿಸುದರೊಂದಿಗೆ ಉತ್ತಮ ಓದುವಂತ ಹವ್ಯಾಸ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ.ಜಿ. ವೀಣಾ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಭಾರತದ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ೧೩೪ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ಮಾತನಾಡಿದ ಅವರು, ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹರಾದ ಡಾ. ಎಸ್‌ಆರ್. ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನವನ್ನು ಗಳಿಸಿಕೊಳ್ಳುತ್ತಿದ್ದೇವೆ.

ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುವುದರೊಂದಿಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಸಮಯವನ್ನು ವೃತ್ತ ಪತ್ರಿಕೆ ಹಾಗೂ ಪುಸ್ತಕವನ್ನು ಓದಲು ಮುಡಿಪಿಡಬೇಕೆಂದರು.

ಕಾಲೇಜಿನ ಗ್ರಂಥಪಾಲಕಿ ಡಾ. ಮುತ್ತಮ್ಮ ಮಾತನಾಡಿ, ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಮೊದಲಿಗರು ಡಾ. ಎಸ್.ಆರ್. ರಂಗನಾಥನ್. ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಆದುದರಿಂದ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲೂ ನಾವಿಂದು ಆಧುನಿಕ ಶೈಲಿಯ ಗ್ರಂಥಾಲಯಗಳನ್ನು ಕಾಣುತ್ತಿದ್ದೇವೆಂದರೆ ಅದಕ್ಕೆ ಮೂಲ ಕಾರಣ ಇವರೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳೊಂದಿಗೆ ಕಳೆದರೆ ಮುಂದಿನ ಅವರ ಜೀವನ ಹೆಚ್ಚು ಜ್ಞಾನಮಯವಾಗಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಂತಿಯ ಬಿ.ಕಾಂ. ವಿದ್ಯಾರ್ಥಿನಿ ಐ.ಪಿ. ಬಿಂದ್ಯ ಡಾ. ಆರ್ ರಂಗನಾಥನ್ ಅವರ ಜೀವನ ಮತ್ತು ಸಾಧನೆಯ ಕುರಿತು ವಿಚಾರ ಮಂಡಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್.ಆರ್.ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಮುಖ್ಯಸ್ಥ ಸೋಮಣ್ಣ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ್, ಬೋಜಮ್ಮ, ವನಿತಾ, ಮಾಣಿಕ್ಯ, ಸುನಿಲ್, ಪವಿತ್ರ, ಭೂಮಿಕ, ಲೋಚನ, ಅನುಪಮ, ಗಾಯಿತ್ರಿ, ಬಾಬು, ಅಕ್ಷರ, ಆಡಳಿತಾತ್ಮಕ ಸಿಬ್ಬಂದಿಗಳಾದ ಸೋಮನಾಥ್, ಹರೀಶ್, ರೇಷ್ಮ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.