ಪೊನ್ನಂಪೇಟೆ, ಆ. ೧೬: ಭಾರತೀಯ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಗ್ರಂಥಾಲಯ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಗ್ರಂಥಪಾಲಕರ ದಿನ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಹಾಗೂ ಅಥಿತಿಗಳು ಡಾ. ಎಸ್.ಆರ್. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಕಾವೇರಿಯಪ್ಪ ಅವರು, ಹೆಚ್ಚು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಜ್ಞಾನವು ಸಮಾಜದಲ್ಲಿನ ವಿವಿಧ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಹಾಗೂ ಸಾಮರ್ಥ್ಯವನ್ನು ನೀಡುತ್ತದೆ. ವಿದ್ಯಾರ್ಥಿಗಳು ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪ ಪ್ರಾಂಶುಪಾಲೆ ಪ್ರೊ. ಎಂ.ಎಸ್. ಭಾರತಿ ಮಾತನಾಡಿ, ಓದು ವ್ಯಕ್ತಿಯ ಆತ್ಮವನ್ನು ಪೋಷಿಸುವುದರ ಜೊತೆಗೆ, ಜೀವನದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಜ್ಞಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದರು.
ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ. ಎಸ್.ಎಸ್. ಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ಅರ್ಧ ಗಂಟೆ ಗ್ರಂಥಾಲಯಕ್ಕೆ ಭೇಟಿ ನೀಡಿ ದಿನಪತ್ರಿಕೆಗಳನ್ನು ಓದಿ, ಸುದ್ದಿವಾಹಿನಿಯಲ್ಲಿ ಸುದ್ದಿಗಳನ್ನು ಆಲಿಸಿ, ಪ್ರಪಂಚದಲ್ಲಿ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ ಎಂದರು.
ಐಕ್ಯೂಎಸಿ ಸಂಚಾಲಕಿ ಡಾ. ನಯನ ತಮ್ಮಯ್ಯ ಮಾತನಾಡಿ, ಗ್ರಂಥಾಲಯ ಕೇವಲ ಪುಸ್ತಕಗಳ ಸಂಗ್ರಹದ ಸ್ಥಳವಲ್ಲ. ಜ್ಞಾನವನ್ನು ವೃದ್ಧಿಸುವ ಕೇಂದ್ರವಾಗಿದ್ದು, ಮನಸ್ಸಿಗೆ ವ್ಯಾಯಾಮ ನೀಡುವ ‘ಜಿಮ್’ನಂತಿದೆ ಎಂದರು.
ಗ್ರAಥಪಾಲಕ ಡಾ. ಸಂತೋಷ್ ಚೌಹಾಣ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಅಮ್ಮಣಿಚಂಡ ಕುಟುಂಬದ ಬಗ್ಗೆ ಸಮಗ್ರ ಮಾಹಿತಿ ಇರುವ, ‘ಅಮ್ಮಣಿಚಂಡ ಒಕ್ಕತ್ರ ಚೆರಿತ್ರೆ' ಪುಸ್ತಕವನ್ನು ಚೇತನ್ ಚಿಣ್ಣಪ್ಪ ಅವರು ಗ್ರಂಥಪಾಲಕರ ಮೂಲಕ ಕಾವೇರಿ ಕಾಲೇಜು ಗ್ರಂಥಾಲಯಕ್ಕೆ ಹಸ್ತಾಂತರಿಸಿದರು. ಗ್ರಂಥಾಲಯದಲ್ಲಿ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕಿ ಟಿ.ಕೆ. ಲತಾ, ಗ್ರಂಥಾಲಯ ಸಿಬ್ಬಂದಿ ಅನುರಾಧ, ಮನು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಕ್ರೀಷ್ಮ ಹಾಗೂ ದೇಚಮ್ಮ ಕಾರ್ಯಕ್ರಮ ನಿರೂಪಿಸಿದರು.