ಕುಶಾಲನಗರ, ಆ. ೧೬: ಮಗುವಿನ ಸದೃಢ ಆರೋಗ್ಯಕ್ಕೆ ಸ್ತನ್ಯಪಾನ ಅತ್ಯಂತ ಅವಶ್ಯಕವಾಗಿದೆ ಎಂದು ಕುಶಾಲನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಧುಸೂದನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ಇನ್ನರ್ ವೀಲ್ ಸಂಸ್ಥೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಡಾ. ಮಧುಸೂದನ್, ಮಗುವಿನ ಆರೋಗ್ಯಕರ ಬೆಳವಣಿಗೆ ದೃಷ್ಟಿಯಿಂದಲೂ ತಾಯಿಯ ಎದೆ ಹಾಲು ನೀಡುವುದು ಉತ್ತಮ ಎಂದು ಹೇಳಿದ ಅವರು, ಆ ಮೂಲಕ ತಾಯಿಯ ಆರೋಗ್ಯವೂ ಕೂಡ ಚೆನ್ನಾಗಿರುತ್ತದೆ ಎಂದು ತಿಳಿಸಿದರು. ವೈದ್ಯ ಡಾ. ಶಿವಕುಮಾರ್ ಮಾತನಾಡಿ, ವೈಜ್ಞಾನಿಕವಾಗಿ ಒಬ್ಬ ಬಾಣಂತಿ ಮಗುವಿನೊಂದಿಗಿನ ನಡವಳಿಕೆ ಹೇಗೆ ಇರಬೇಕೆಂದು ಸವಿಸ್ತಾರವಾಗಿ ಮನದಟ್ಟು ಮಾಡಿದರು. ಸ್ತನ್ಯಪಾನದ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಇರುವ ಮೂಢನಂಬಿಕೆಯ ಬಗ್ಗೆಯೂ ಮಾಹಿತಿ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಸೀತಾಲಕ್ಷ್ಮಿ ಮಾತನಾಡಿ, ಸ್ತನ್ಯಪಾನದಿಂದ ತಾಯಿ ಮಗುವಿನ ಭಾವನಾತ್ಮಕ ಸಂಬAಧ ಅಧಿಕಗೊಳ್ಳುತ್ತದೆ ಎಂದು ತಿಳಿಸಿದರು.ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಶಾಂತಿ ಸ್ತನ್ಯಪಾನದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಾಲಿನಿ ನರೇಂದ್ರ, ಚಿತ್ರಾ ರಮೇಶ್, ಖಜಾಂಚಿ ಕುಸುಮ ನಟೇಶ್, ಮಾಜಿ ಅಧ್ಯಕ್ಷರಾದ ಸುನೀತಾ ಮಹೇಶ್, ಶೀನ ಪ್ರಕಾಶ್ ಮತ್ತು ರೂಪ ಗಣೇಶ್ ಮತ್ತಿತರರು ಇದ್ದರು.