ಕುಶಾಲನಗರ, ಆ. ೧೨: ಗುಡ್ಡೆಹೊಸೂರು ಗ್ರಾ.ಪಂ. ವಿಶೇಷ ಅನುದಾನದಡಿ ರೂ ೪.೫೦ ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಮಾದಾಪಟ್ಟಣ ಅಂಗನವಾಡಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಆಧುನೀಕರಣಗೊಂಡ ಅಂಗನವಾಡಿ ಕೇಂದ್ರಕ್ಕೆ ಚಾಲನೆ ನೀಡಿದರು.

ವಿ.ಪಿ.ಶಶಿಧರ್ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಲು, ಶಿಕ್ಷಣದ ಬಗ್ಗೆ ಕುತೂಹಲ ಉಂಟುಮಾಡಲು ಇಂತಹ ಪರಿಣಾಮಕಾರಿ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ತುಂಬಾ ಹಳೆಯ ಕಟ್ಟಡವನ್ನು ಪುನರುಜೀವನಗೊಳಿಸಿ ಈ ಭಾಗದ ಬಡ ವರ್ಗದ ಮಕ್ಕಳಿಗೆ ಆಶಾದಾಯಕ ವಾತಾವರಣ ಕಲ್ಪಿಸಿರುವುದು ಶ್ಲಾಘನೀಯ. ಈ ಕೇಂದ್ರದ ಉಳಿವಿಗೆ ಹಾಗೂ ಅಭಿವೃದ್ದಿಗೆ ಸ್ಥಳೀಯರ ನಿರಂತರ ಪ್ರಯತ್ನ ಅಭಿನಂದನಾರ್ಹ ಎಂದರು. ಈ ಸಂದರ್ಭ ಮಾತನಾಡಿದ ಮಾದಾಪಟ್ಟಣದ ದಾಮೋದರ್, ೪ ದಶಕಗಳ ಹಳೆಯದಾದ ಅಂಗನವಾಡಿ ಕೇಂದ್ರಕ್ಕೆ ಕಳೆದ ೩ ದಶಕಗಳಿಂದ ಖಾಯಂ ಶಿಕ್ಷಕರ ನೇಮಕಾತಿಯಾಗಿಲ್ಲ. ಸ್ಥಳೀಯರಿಗೆ ಆದ್ಯತೆ ನೀಡಿ ಶಿಕ್ಷಕಿಯಾಗಿ ನೇಮಕಾತಿ ಮಾಡಬೇಕಿದೆ. ಆ ಮೂಲಕ ಮಾತ್ರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗಲಿದೆ. ಜೊತೆಗೆ ಸಹಾಯಕಿ ನೇಮಕಾತಿ ಕೂಡ ಅಗತ್ಯವಿದೆ ಎಂದು ಆಗ್ರಹಿಸಿದರು. ಪೋಷಕಿ ಶಶಿಕಲಾ ಮತ್ತು ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷೆ ರುಕ್ಮಿಣಿ ಮಾತನಾಡಿ, ಶಿಥಿಲಗೊಂಡಿದ್ದ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸುವುದಕ್ಕೆ ಹಿಂಜರಿಕೆಯಿತ್ತು. ಇದೀಗ ಕಟ್ಟಡಕ್ಕೆ ಕಾಯಕಲ್ಪ ದೊರೆತಿರುವುದು ಪೋಷಕರಲ್ಲಿ ಆತಂಕ ದೂರಮಾಡಿದೆ ಎಂದರು. ಅಗತ್ಯ ಮಾನದಂಡಗಳ ಅನುಸಾರವಾಗಿ ಆದ್ಯತೆ ಮೇರೆಗೆ ಇಲ್ಲಿಗೆ ಖಾಯಂ ಶಿಕ್ಷಕಿಯ ನೇಮಕಾತಿ ಮಾಡಬೇಕೆನ್ನುವ ಪೋಷಕರ ಒತ್ತಾಸೆಯಂತೆ ಸ್ಥಳೀಯರನ್ನೇ ಶಿಕ್ಷಕಿಯಾಗಿ ನೇಮಿಸುವ ಕುರಿತು ಆಯ್ಕೆ ಪಟ್ಟಿ ಪರಿಶೀಲಿಸಲಾಗುವುದು ಎಂದರು.

ಈ ಸಂದರ್ಭ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ರಜಾಕ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಆದಂ, ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಯುವ ಘಟಕ ಅಧ್ಯಕ್ಷ ವಿಜಯ್, ಬೂತ್ ಅಧ್ಯಕ್ಷ ಹೆಚ್.ಕೆ ಮಹೇಶ್, ಗ್ರಾಮಸ್ಥರಾದ ಬಸವರಾಜು ಎಂ.ಎA, ಎಂ.ಎಲ್. ಪ್ರಕಾಶ್, ಎಂ.ಆರ್.ರವಿ, ಶಿಕ್ಷಕಿ ರೂಪಶ್ರೀ ಇದ್ದರು.