ಗೋಣಿಕೊಪ್ಪಲು, ಆ. ೧೨: ಕಳೆದ ೫೦ ವರ್ಷಗಳಿಂದ ಕೊಡಗಿನ ಯುವಕರಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಕಲ್ಪಿಸಿ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಲು ವೇದಿಕೆ ಒದಗಿಸಿರುವ ಗೋಣಿಕೊಪ್ಪಲುವಿನ ಪ್ರತಿಷ್ಠಿತ ಬಾಸ್ಕೆಟ್‌ಬಾಲ್ ಕ್ಲಬ್ (ಬಿಬಿಸಿ) ಸುವರ್ಣ ಸಂಭ್ರಮ ಆಚರಿಸಿತು.

ಗೋಣಿಕೊಪ್ಪ ಸಮೀಪದ ಖಾಸಗಿ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿಬಿಸಿ ಸದಸ್ಯರನ್ನು ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಬಿಸಿ ಅಧ್ಯಕ್ಷ ಹಾಗೂ ಒಲಿಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ ಮಾತನಾಡಿ, ಕಳೆದ ಐದು ದಶಕಗಳಲ್ಲಿ ಬಿಬಿಸಿ ಮಾಡಿದ ಸಾಧನೆಗಳನ್ನು ಸ್ಮರಿಸಿದರು.

೫೦ ವರ್ಷಗಳ ಹಿಂದೆ ಸ್ಥಾಪಕ ಅಧ್ಯಕ್ಷ ಚೆಪ್ಪುಡೀರ ಸುಭಾಷ್ ಮುತ್ತಣ್ಣ ಅವರು ಬಿಬಿಸಿ ಕ್ಲಬ್ ಸ್ಥಾಪಿಸಿ, ಸ್ವಂತ ಹಣವನ್ನು ವ್ಯಯಿಸಿ ನುರಿತ ಕೋಚ್‌ಗಳನ್ನು ಕರೆಸಿ ಕೊಡಗಿನ ಯುವಕರಿಗೆ ಬಾಸ್ಕೆಟ್‌ಬಾಲ್ ಹಾಗೂ ಹಾಕಿ ತರಬೇತಿ ನೀಡಿದ್ದರು. ಇದರಿಂದ ಅನೇಕ ಕ್ರೀಡಾಪಟುಗಳಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ದೊರೆಯಿತು. ಕ್ರೀಡೆಯ ಮೂಲಕ ಸೇನೆ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಕೊಡಗಿನ ಯುವಕರಿಗೆ ದಾರಿ ತೆರೆದಿತು ಎಂದರು.

ಮುAದೆಯೂ ಬಿಬಿಸಿ ಮೂಲಕ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಂಡು ಕೊಡಗಿನ ಯುವಕ-ಯುವತಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಪ್ರಯತ್ನ ಮುಂದುವರಿಯಬೇಕು. ಪ್ರಸ್ತುತ ಕ್ಲಬ್ ನೂರಾರು ಸದಸ್ಯರನ್ನು ಹೊಂದಿದ್ದು, ಪ್ರತಿವರ್ಷ ಬೇಸಿಗೆ ಶಿಬಿರಗಳ ಮೂಲಕ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತರಬೇತಿಯಲ್ಲಿ ಪಾಲ್ಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.

ಸನ್ಮಾನ ಸ್ವೀಕರಿಸಿದ ಬಿಬಿಸಿ ಸ್ಥಾಪಕ ಅಧ್ಯಕ್ಷ ಚೆಪ್ಪುಡೀರ ಸುಭಾಷ್ ಮುತ್ತಣ್ಣ ಮಾತನಾಡಿ, ಐದು ದಶಕಗಳ ಹಿಂದೆ ಇಂದಿನAತೆ ಕ್ರೀಡಾ ಸೌಲಭ್ಯಗಳು ಲಭ್ಯವಿರಲಿಲ್ಲ. ಕ್ರೀಡೆಗೆ ಆಸಕ್ತಿ ಹೊಂದಿದ್ದ ಪ್ರತಿಭಾವಂತ ಯುವಕ-ಯುವತಿಯರಿಗೆ ಸ್ವಂತ ಹಣದಿಂದ ತರಬೇತಿ ಕೊಡಿಸಿ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಕಲ್ಪಿಸಲಾಗಿತ್ತು. ಇದರ ಪ್ರಯೋಜನ ಪಡೆದ ಅನೇಕ ಕ್ರೀಡಾಪಟುಗಳು ಕ್ರೀಡೆಯ ಮೂಲಕ ಉತ್ತಮ ಉದ್ಯೋಗ ಪಡೆದು ಜೀವನ ರೂಪಿಸಿಕೊಂಡಿದ್ದಾರೆ. ಅವರೆಲ್ಲರೂ ಸುವರ್ಣ ಸಂಭ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.

ಬಿಬಿಸಿ ಮೂಲಕ ಬಾಸ್ಕೆಟ್‌ಬಾಲ್‌ನಲ್ಲಿ ೧೨ ಬಾರಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಬಳಿಕ ರಾಷ್ಟ್ರಮಟ್ಟದಲ್ಲಿಯೂ ಸಾಧನೆ ಮಾಡಿ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ ಪಡೆದ ಕೇಚೆಟ್ಟಿರ ರವಿ ದೇವಯ್ಯ ಮಾತನಾಡಿ, ಬಿಬಿಸಿ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡವರಲ್ಲಿ ತಾನೂ ಒಬ್ಬ. ಬಿಬಿಸಿ ಸಂಸ್ಥೆಗೆ ಸದಾ ಚಿರಋಣಿಯಾಗಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮನೆಯಪಂಡ ಮೋತಿ ಉತ್ತಪ್ಪ, ಪಳಂಗAಡ ವಾಣಿ ಚಂಗಪ್ಪ, ಚೆಪ್ಪುಡೀರ ಅಪ್ಪಣ್ಣ ಮುತ್ತಣ್ಣ, ಪಳಂಗAಡ ಸುರೇಶ್ ಚಂಗಪ್ಪ, ಚೆರಿಯಂಡ ವಿಶ್ವನಾಥ್, ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಕೋಟೇರ ಮುದ್ದಯ್ಯ, ಒಲಿಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಬಿಬಿಸಿ ಕಾರ್ಯದರ್ಶಿ ಚೆಪ್ಪುಡೀರ ಅಪ್ಪಣ್ಣ ಮುತ್ತಣ್ಣ ಸ್ವಾಗತಿಸಿದರು. ಅಧ್ಯಕ್ಷ ಬಾಳೆಯಡ ಸುಬ್ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಚ್. ಪ್ರಜ್ಞಾ, ಪಾಯಲ್ ಪೂವಮ್ಮ ಹಾಗೂ ಶಿಪ್ರ ಕಾಳಪ್ಪ ಕಾರ್ಯಕ್ರಮ ನಿರೂಪಿಸಿದರು.

ಬಿಬಿಸಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯ ಸದಸ್ಯರು ಸುವರ್ಣ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.