ಕೋವರ್ ಕೊಲ್ಲಿ ಇಂದ್ರೇಶ್

ಮAಗಳೂರು, ಆ. ೧೨: ಪಣಂಬೂರಿನಲ್ಲಿ ಜೂನ್ ೨೯ ರಂದು ನಡೆದ ಜುವೆಲ್ಲರಿ ಉದ್ಯಮಿಯ ದರೋಡೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರು ಮೂಲದ ಮಿಥುನ್ ಲಾಲ್ ಮತ್ತು ಶ್ರೀರಾಗ್ ಹಾಗೂ ಮಡಿಕೇರಿ ಮೂಲದ ಉಬೇದ್ ಮತ್ತು ಜಿಯಾದ್ ಬಂಧಿತರು. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದ್ದು, ಪ್ರಮುಖ ಆರೋಪಿ ಸೇರಿದಂತೆ ಇನ್ನೂ ಕೆಲವರು ತಲೆಮರೆಸಿಕೊಂಡಿರುವ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಬAಧಿತರ ಪೈಕಿ ಶ್ರೀರಾಗ್ ಕಣ್ಣೂರು ಜಿಲ್ಲೆಯಲ್ಲಿ ಸಿಪಿಐ ಪಕ್ಷದ ಸ್ಥಳೀಯ ಮಟ್ಟದ ನಾಯಕನಾಗಿ ಗುರುತಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದರೋಡೆ ಪ್ರಕರಣದಲ್ಲಿ ಆತನ ನೇರ ಭಾಗವಹಿಸುವಿಕೆ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕಣ್ಣೂರಿನಲ್ಲಿರುವ ಆತನ ಮನೆಗೆ ತೆರಳಿ ಶೋಧ ನಡೆಸಿದ್ದರು. ಬಳಿಕ ಪ್ರಕರಣದಲ್ಲಿ ಬಂಧನವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಶ್ರೀರಾಗ್ ವಕೀಲರ ಮೂಲಕ ಮಂಗಳೂರಿಗೆ ಬಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಮಿಥುನ್ ಲಾಲ್, ಉಬೇದ್ ಮತ್ತು ಜಿಯಾದ್ ಕೂಡ ವಕೀಲರ ಮೂಲಕ ಮಂಗಳೂರಿನಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಿಥುನ್‌ನನ್ನು ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿ ಬಂಧಿಸಿದ್ದಾರೆ. ಉಬೇದ್ ಮತ್ತು ಜಿಯಾದ್ ಪಡೀಲ್ ಪ್ರದೇಶದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರಿAದ ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದರೋಡೆ ಸಂದರ್ಭದಲ್ಲಿ ಬಳಸಿದ್ದ ಎನ್ನಲಾದ ಕಬ್ಬಿಣದ ರಾಡ್, ಗ್ಲೌಸ್ ಹಾಗೂ ೧೦ ಗ್ರಾಂ ತೂಕದ ಚಿನ್ನದ ಉಂಗುರವನ್ನೂ ವಶಪಡಿಸಿಕೊಳ್ಳಲಾಗಿದೆ. ದೋಚಲಾದ ಚಿನ್ನ ಮತ್ತು ಹಣದ ಬಹುಪಾಲು ಇನ್ನೂ ಪತ್ತೆಯಾಗಿಲ್ಲ ಎಂದು ತನಿಖಾ ಮೂಲಗಳು ತಿಳಿಸಿವೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಲಾಗಿರುವ ಕಣ್ಣೂರು ಮೂಲದ ಶಿಜಿನ್ ಗಂಗಾಧರನ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ. ಬಂಧಿತ ಆರೋಪಿಗಳನ್ನು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ವಿಚಾರಣೆ ನಡೆಸಿದಾಗ ದರೋಡೆ ಮಾಡಲಾದ ಚಿನ್ನ ಅಥವಾ ಹಣ ತಮ್ಮ ಬಳಿ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಒಂದು ಚಿನ್ನದ ಉಂಗುರವನ್ನು ಆರೋಪಿಗಳು ಮಾರಾಟ ಮಾಡಿದ್ದ ಸ್ಥಳದಿಂದಲೇ ಪತ್ತೆಹಚ್ಚಲಾಗಿದೆ.

ಆರೋಪಿಗಳ ಹೇಳಿಕೆಯ ಪ್ರಕಾರ, ಶಿಜಿನ್ ಹಲವು ವರ್ಷಗಳಿಂದ ಗುಜರಾತಿನ ಅಹಮದಾಬಾದ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ. ಕೆಲವೊಮ್ಮೆ ಮಾತ್ರ ಕಣ್ಣೂರಿಗೆ ಬರುತ್ತಿದ್ದ ಆತ, ಸ್ಥಳೀಯವಾಗಿ ತಂಡವೊAದನ್ನು ಕಟ್ಟಿಕೊಂಡು ದರೋಡೆಗೆ ಯೋಜನೆ ರೂಪಿಸುತ್ತಿದ್ದ ಎನ್ನಲಾಗಿದೆ. ಆದರೆ ದರೋಡೆ ಬಳಿಕ ದೋಚಲಾದ ಚಿನ್ನ ಮತ್ತು ನಗದು ಎಲ್ಲಿಗೆ ಸಾಗಿಸಲಾಗಿದೆ ಎಂಬ ಬಗ್ಗೆ ತನಿಖಾಧಿಕಾರಿಗಳಿಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಪ್ರಕರಣದ ತನಿಖೆಯ ಭಾಗವಾಗಿ ಮಂಗಳೂರು ಪೊಲೀಸರು ಈ ಹಿಂದೆ ೧೩ ಮಂದಿ ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿ, ಅವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಪಟ್ಟಿಯಲ್ಲಿ ಶಿಜಿನ್ ಗಂಗಾಧರನ್‌ನನ್ನು ಪ್ರಮುಖ ಆರೋಪಿಯಾಗಿ ಗುರುತಿಸಲಾಗಿತ್ತು.

ಜೂನ್ ೨೯ರಂದು ಮಹಾರಾಷ್ಟ್ರದ ಸಾಂಗ್ಲಿಯಿAದ ಮಂಗಳೂರಿಗೆ ವಾಪಸ್ ಬರುತ್ತಿದ್ದ ಜುವೆಲ್ಲರಿ ಉದ್ಯಮಿ ವಿಕಾಸ್ ಧನವಡೆ ಅವರ ಕಾರನ್ನು ಪಣಂಬೂರು ಸಮೀಪದ ಬೈಕಂಪಾಡಿ ಹೆದ್ದಾರಿಯಲ್ಲಿ ಆರೋಪಿಗಳು ಅಡ್ಡಗಟ್ಟಿದ್ದರು. ಇನ್ನೋವಾ ಮತ್ತು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಆರೋಪಿಗಳು ಉದ್ಯಮಿಯ ವಾಹನವನ್ನು ತಡೆದು ದರೋಡೆ ನಡೆಸಿದ್ದರು.

ಘಟನೆಯಲ್ಲಿ ಸುಮಾರು ೧೮೦ ಗ್ರಾಂ ಚಿನ್ನ ಹಾಗೂ ನಗದು ಸೇರಿದಂತೆ ಒಟ್ಟು ೨೦ ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಕಳವಾಗಿರುವುದಾಗಿ ವಿಕಾಸ್ ಧನವಡೆ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದರೋಡೆಯ ಮರುದಿನವೇ ಪ್ರಕರಣಕ್ಕೆ ಸಂಬAಧಿಸಿದ ಸ್ವಿಫ್ಟ್ ಡಿಸೈರ್ ಕಾರು ಬಂಟ್ವಾಳ ಸಮೀಪದ ಪಚ್ಚಿನಡ್ಕದಲ್ಲಿ ಪತ್ತೆಯಾಗಿತ್ತು. ಪ್ರಕರಣದ ಆರಂಭಿಕ ತನಿಖೆಯಲ್ಲೇ ಕಣ್ಣೂರು ಮೂಲದ ನಿಮಿಲ್ ಎಂಬಾತನನ್ನು ಬಂಧಿಸಲಾಗಿತ್ತು. ಆರೋಪಿಗಳಿಗೆ ಪರಾರಿಯಾಗಲು ನೆರವು ನೀಡಿದ ಆರೋಪದಡಿ ಕೊಡಗು ಮೂಲದ ಇರ್ಶಾದ್ ಮತ್ತು ಮುಸ್ತಾಫ ಅವರನ್ನೂ ಪೊಲೀಸರು ಬಂಧಿಸಿದ್ದರು.

ಪ್ರಕರಣದಲ್ಲಿ ದೋಚಲಾದ ಚಿನ್ನಕ್ಕಿಂತಲೂ ಹವಾಲಾ ಹಣದ ಬಗ್ಗೆ ಆರೋಪಿಗಳಿಗೆ ಮಾಹಿತಿ ಇತ್ತೇ ಎಂಬ ಅನುಮಾನವೂ ಪೊಲೀಸರ ತನಿಖೆಯಲ್ಲಿ ಮೂಡಿದೆ. ದರೋಡೆ ಸಂದರ್ಭದಲ್ಲಿ ಉದ್ಯಮಿ ವಿಕಾಸ್ ಧನವಡೆ ಅವರ ಪತ್ನಿಯ ಮೈಮೇಲೆ ಸಾಕಷ್ಟು ಚಿನ್ನಾಭರಣಗಳಿದ್ದರೂ ಆರೋಪಿಗಳು ಅವುಗಳನ್ನು ಕಸಿದುಕೊಳ್ಳದೆ ವಾಹನವನ್ನು ಮಾತ್ರ ಗುರಿಯಾಗಿಸಿಕೊಂಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಹವಾಲಾ ಹಣ ಅಥವಾ ಚಿನ್ನದ ಗಟ್ಟಿ ಬಗ್ಗೆ ಮಾಹಿತಿ ಪಡೆದುಕೊಂಡೇ ಆರೋಪಿಗಳು ದರೋಡೆ ನಡೆಸಿದ್ದರೇ ಎಂಬ ಆಯಾಮದಲ್ಲಿಯೂ ತನಿಖೆ ನಡೆಯುತ್ತಿದೆ. ದರೋಡೆಗೆ ಮುನ್ನ ಉದ್ಯಮಿಯ ಚಲನವಲನದ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದವರು ಯಾರು, ತಂಡಕ್ಕೆ ಹಣ ಅಥವಾ ಚಿನ್ನದ ಬಗ್ಗೆ ಮಾಹಿತಿ ಹೇಗೆ ದೊರೆಯಿತು ಮತ್ತು ದೋಚಿದ ಸೊತ್ತುಗಳನ್ನು ಯಾರು ಪಡೆದುಕೊಂಡರು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸದ್ಯ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಬಂಧನವಾಗಿದ್ದು, ಇನ್ನೂ ಹಲವು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಸಾದ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಮುಖ ಆರೋಪಿ ಶಿಜಿನ್ ಗಂಗಾಧರನ್ ಪತ್ತೆಯಾದ ಬಳಿಕ ದರೋಡೆಗೆ ರೂಪಿಸಲಾದ ಸಂಚು, ತಂಡದ ಇತರ ಸದಸ್ಯರ ಪಾತ್ರ ಹಾಗೂ ದೋಚಲಾದ ಚಿನ್ನ ಮತ್ತು ನಗದು ಎಲ್ಲಿಗೆ ಸಾಗಿಸಲಾಗಿದೆ ಎಂಬ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ.