ಗೋಣಿಕೊಪ್ಪಲು, ಆ. ೧೨: ಕೊಡಗಿನ ಕಾಫಿ ತೋಟಗಳಲ್ಲಿ ಕಾಫಿ ಕಾಯಿಗಳು ಕಟ್ಟಿರುವ ಸಂದರ್ಭದಲ್ಲೇ ಕೊಳೆರೋಗ ಬಾಧೆ ಕಾಣಿಸಿಕೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ಮಳೆಯಿಂದ ಕಾಫಿ ಕಾಯಿಗಳು ಕೊಳೆತು ನೆಲಕ್ಕೆ ಉದುರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಧಾವಿಸಿ ಪರಿಹಾರ ಘೋಷಿಸಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಒತ್ತಾಯಿಸಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ನೇತೃತ್ವದ ತಂಡ ಜಿಲ್ಲೆಯ ವಿವಿಧ ಭಾಗಗಳ ಕಾಫಿ ತೋಟಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿತು. ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ, ಬಿಟ್ಟಂಗಾಲ, ಬಿರುನಾಣಿ, ಶ್ರೀಮಂಗಲ ಸೇರಿದಂತೆ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳ ತೋಟಗಳಿಗೆ ತೆರಳಿದ ತಂಡ, ರೈತರೊಂದಿಗೆ ಚರ್ಚಿಸಿ ಕೊಳೆರೋಗದಿಂದ ಹಾನಿಗೊಳಗಾಗಿರುವ ಕಾಫಿ ಕಾಯಿಗಳು ಹಾಗೂ ನೆಲಕ್ಕೆ ಉದುರುತ್ತಿರುವ ಕಾಯಿಗಳ ಪ್ರಮಾಣವನ್ನು ಪರಿಶೀಲಿಸಿತು.

ಬಿ.ಶೆಟ್ಟಿಗೇರಿ ಕೊಂಗಣ ಗ್ರಾಮದ ಕಾಫಿ ಬೆಳೆಗಾರ ತೀತಿಮಾಡ ಲಾಲಾ ಭೀಮಯ್ಯ ಅವರ ತೋಟಕ್ಕೆ ಭೇಟಿ ನೀಡಿದ ಸಂದರ್ಭ ಪ್ರತಿ ಎಕರೆಯಲ್ಲಿ ಬೆಳೆಯಲಾಗಿರುವ ೪೦೦ಕ್ಕೂ ಅಧಿಕ ಕಾಫಿ ಗಿಡಗಳ ಪೈಕಿ ೫೦ರಿಂದ ೬೦ ಗಿಡಗಳಿಗೆ ಕೊಳೆರೋಗ ಬಾಧಿಸಿರುವುದು ಕಂಡುಬAದಿದೆ.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಈ ಸಂದರ್ಭ ಮಾತನಾಡಿದ ಲಾಲಾ ಭೀಮಯ್ಯ, ಕೊಡಗಿನ ರೈತರು ವರ್ಷವಿಡೀ ಕಾಫಿ ಬೆಳೆಯನ್ನೇ ನಂಬಿಕೊAಡು ಜೀವನ ಸಾಗಿಸುತ್ತಿದ್ದಾರೆ. ಇದೀಗ ಕಾಯಿಕಟ್ಟಿರುವ ಸಂದರ್ಭದಲ್ಲಿ ಕೊಳೆರೋಗ ಬಾಧೆಯಿಂದ ಕಾಫಿ ಕಾಯಿಗಳು ಹಾಳಾಗುತ್ತಿದ್ದು, ಎಕರೆಗೆ ೬೦ರಿಂದ ೭೦ ಗಿಡಗಳು ರೋಗಬಾಧೆಗೆ ಒಳಗಾಗಿವೆ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ರೈತರ ಸಂಕಷ್ಟವನ್ನು ಪರಿಗಣಿಸಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಬೆಳೆ ಪರಿಹಾರ ದೊರೆತಿತ್ತು. ಆದರೆ ಈ ಬಾರಿ ಇದುವರೆಗೆ ಯಾವುದೇ ಬೆಳೆ ಪರಿಹಾರ ದೊರೆತಿಲ್ಲ. ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ರೈತರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ಘೋಷಣೆಗೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಕೆ

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಮ್ಮುಣಿಚಂಡ ರಂಜಿ ಪೂಣಚ್ಚ ಮಾತನಾಡಿ, ಜಿಲ್ಲೆಯ ವಿವಿಧ ಭಾಗಗಳ ಕಾಫಿ ತೋಟಗಳಿಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ವೇಳೆ ಕಾಫಿ ಬೆಳೆಗೆ ಕೊಳೆರೋಗದ ಬಾಧೆ ವ್ಯಾಪಕವಾಗಿರುವುದು ಕಂಡುಬAದಿದೆ. ರೈತರ ಕಾಫಿ ಬೆಳೆ ನಷ್ಟದ ಕುರಿತು ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ಘೋಷಿಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಪರಿಹಾರ ದೊರಕಿಸುವಂತೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದರು.

ಸಮೀಕ್ಷೆ ವೇಳೆ ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಚೋಡುಮಾಡ ದಿನೇಶ್, ಕಾರ್ಯದರ್ಶಿ ಆಲೆಮಾಡ ಸುಧೀರ್, ಜಿಲ್ಲಾ ಸಮಿತಿ ಸದಸ್ಯರುಗಳಾದ ಪಂದಿಮಾಡ ರಮೇಶ್, ಕುಪ್ಪಂಡ ಮೋಹನ್, ಕುಪ್ಪಂಡ ದಿಲನ್ ಬೋಪಣ್ಣ, ವೀರಾಜಪೇಟೆ ರೈತ ಮೋರ್ಚಾದ ಮಂಡಲ ಅಧ್ಯಕ್ಷ ಗುಡ್ಡಮಾಡ ಅಪ್ಪಿ ಸುಬ್ರಮಣಿ ಮುಂತಾದವರು ಇದ್ದರು.