ಚೆಯ್ಯಂಡಾಣೆ, ಆ. ೧೧: ಕಳಂಜ ಕಳಿ, ಕಕ್ಕಡತಜ್ಜಿ ಎಂಬ ಸಾಂಪ್ರದಾಯಿಕ ಆಚರಣೆ ಕೊಡಗಿನ ಗ್ರಾಮಾಂತರ ಭಾಗವಾದ ಚೆಯ್ಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಇಂದು ಕೂಡ ರೂಢಿಯಲ್ಲಿದೆ.

ಕೊಡಗಿನಲ್ಲಿ ಕಳಂಜ ಕಳಿ, ಕಕ್ಕಡತಜ್ಜಿ ಅನಾದಿ ಕಾಲದಿಂದಲೂ ಆಚರಣೆಯಲ್ಲಿತ್ತು. ಆದರೆ ಇಂದು ಮರೆಯಾಗುವ ಅಂಚಿನಲ್ಲಿದೆ. ತನ್ನ ಎಲ್ಲಾ ಆಚರಣೆಯನ್ನೇ ಕಳೆದುಕೊಳ್ಳುತ್ತಿದೆ. ಕಕ್ಕಡ ತಿಂಗಳಲ್ಲಿ ಕೊಡಗಿನ ದೇವಾಲಯದಲ್ಲಿ ಪೂಜೆ - ಪುನಸ್ಕಾರ ಇರುವುದಿಲ್ಲ. ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾದ ಅರಮನೆ ಪಾಲೆ ಜನಾಂಗದವರು ಕಳಂಜ ಕಳಿ, ಕಕ್ಕಡತಜ್ಜಿ ಆಚರಣೆಯನ್ನು ಪ್ರಾಚೀನ ಕಾಲದಿಂದಲೂ ನಡೆಸುತ್ತಾ ಬರುತ್ತಿದ್ದಾರೆ.

ನರಿಯಂದಡ ಗ್ರಾಮದ ತೆರ್ಮೆಕಾಡು ಪೈಸಾರಿಯಲ್ಲಿ ವಾಸವಾಗಿರುವ ಅರಮನೆ ಪಾಲೆ ಜನಾಂಗದವರು ಈ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಹಬ್ಬದ ಆಚರಣೆಯಲ್ಲಿ ಮೂರು ವೇಶಧಾರಿಗಳು ಇರುತ್ತಾರೆ. ಅಜ್ಜಿ, ದೊಡ್ಡ ಕಳಂಜ, ಸಣ್ಣ ಕಳಂಜ ಎಂಬ ೩ ವೇಶಧಾರಿಗಳು ಇರುವರು, ಅಜ್ಜಿ ವೇಶಧಾರಿ ಮುಖಕ್ಕೆ ಬಣ್ಣ ಬಳೆದು ಹಣೆಗೆ ತಳಪಳಿ ಕಟ್ಟಿ, ಕೆಂಪು ವಸ್ತç ಧರಿಸಿ ಕೈಯಲ್ಲಿ ನೆಕ್ಕಿ ಸೊಪ್ಪುನ್ನು ಹಿಡಿದಿರುತ್ತಾರೆ. ದೊಡ್ಡ ಕಳಂಜ ಮೈಯಲ್ಲಾ ಕಪ್ಪು ಬಣ್ಣ ಬಳಿದುಕೊಂಡು, ಕೈಯಲ್ಲಿ ದೊಣ್ಣೆ ಹಿಡಿದು ಮರದ ಮುಖವಾಡವನ್ನು ಧರಿಸಿರುತ್ತಾರೆ. ಸಣ್ಣ ಕಳಂಜ ಮೈಗೆಲ್ಲಾ ಕಪ್ಪು ಮಸಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ)ಬಳಿದುಕೊAಡು ಮೀಸೆ ಧರಿಸಿರುತ್ತಾನೆ.

ಮೊದಲನೇಯ ದಿನ ಕಳಂಜ ವೇಶಧರಿಸಿ ಇವರು ಅರಪಟ್ಟು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಗ್ರಾಮದ ತಕ್ಕ ಮುಖ್ಯಸ್ಥರ ಮನೆಗೆ ಚಂಡೆ ವಾದ್ಯದೊಂದಿಗೆ ಕುಣಿಯುತ್ತಾ,

ಓ ಕಳಂಜ, ಪಾರೋಂತು ಬಲ ಓ ಕಳಂಜ, ನಲಿತೋಂತು ಬಲ ಓ ಕಳಂಜ, ಕುಳ್ಳೊಂತು ಬಲ ಓ ಕಳಂಜ, ಬೂರೂಂತು ಬಲ ಓ ಕಳಂಜ, ಅಂಚಿ ಇಂಚಿ ತೂವೋಂತು ಬಲ ಓ ಕಳಂಜ... ಎಂದು ಹಾಡುತ್ತಾ, ಕುಣಿಯುತ್ತಾ ಚಂಡೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ತೆರಳುತ್ತಾರೆ. ಬಳಿಕ ಮನೆ ಮನೆಗೆ ತೆರಳಿ ಅಕ್ಕಿ ಧಾನ್ಯಗಳನ್ನು ಅವರಿಂದ ಪಡೆಯುತ್ತಾರೆ. ಊರಿಗೆ, ನಾಡಿಗೆ ಒಳ್ಳೆಯದಾಗಲಿ, ರೋಗ ರುಜಿನಗಳು ಬಾರದಿರಲಿ, ಊರಿನ ಮಂದಿಯ ಮಾರಿ ದೃಷ್ಟಿ ತೆಗೆಯುವ ಉದ್ದೇಶದಿಂದ ಈ ವೇಶ ಹಾಕುತ್ತಾರೆ ಎಂದು ಹಿರಿಯರು ಹೇಳುತ್ತಾರೆ. ಈ ವೇಶಧಾರಿಗಳು ಸುಮಾರು ೭ ದಿನಗಳ ಕಾಲ ವೇಶಧರಿಸಿ ಮೊದಲ ದಿನ ಅರಪಟ್ಟು ಭಗವತಿ ದೇವಾಲಯ ೨ನೇ ದಿನ ಚೇಲಾವರ ಗ್ರಾಮದ ಪೊನ್ನೋಲ ದೇವಾಲಯ, ೩ನೇ ದಿನ ಕಿರುಂದಾಡು ದೇವಾಲಯಕ್ಕೆ, ನಾಲ್ಕನೇ ದಿನ ಕೊಕೇರಿ ಭಗವತಿ ದೇವಸ್ಥಾನ, ಐದನೇ ದಿನ ನರಿಯಂದಡ ಭಗವತಿ ದೇವಸ್ಥಾನ ಹಾಗೂ ಎಲ್ಲಾ ಊರುಗಳನ್ನು ಸುತ್ತಿ, ಅವರಿಂದ ಧನ ದವಸ ಧಾನ್ಯಗಳನ್ನು ಸ್ವೀಕರಿಸಿ ೭ ದಿನಗಳ ಕಾಲ ಸಂಭ್ರಮಿಸಿ ಈ ಹಬ್ಬಕ್ಕೆ ತೆರೆ ಎಳೆಯುತ್ತಾರೆ. ಹಿಂದಿನ ಕಾಲದಲ್ಲಿ ಈ ಆಚರಣೆಯನ್ನು ಕಡಿಯತ್ತ್ ನಾಡಿನ ಎಲ್ಲಾ ಗ್ರಾಮಗಳಲ್ಲೂ ಅರಮನೆ ಪಾಲೆ ಜನಾಂಗದವರು ಆಚರಿಸುತ್ತಿದ್ದರು.

ವೇಷಧಾರಿಗಳು ತುಳು ಭಾಷೆಯನ್ನು ಮಾತನಾಡುವ ಜನಾಂಗದವರಾಗಿದ್ದಾರೆ. ವೇಶಧರಿಸಿದ ನಂತರ ಭಕ್ತಾದಿಗಳಿಗೆ ಆಶೀರ್ವಾದ ಮಾಡುತ್ತಾರೆ. ವೇಶಧಾರಿಗಳ ಜೊತೆಯಲ್ಲಿ ಚಂಡೆಯವರು ಮತ್ತು ಇಬ್ಬರು ಹೆಂಗಸರು ಕುಕ್ಕೆಯನ್ನು ತಲೆಯಲ್ಲಿಟ್ಟು, ಇವರೊಂದಿಗೆ ಊರೂರು ಸುತ್ತಿ, ಜನರಿಂದ ಅಕ್ಕಿ, ಬೆಲ್ಲ, ಮೆಣಸು ಉಪ್ಪು ವಸ್ತುಗಳನ್ನು ದಾನವಾಗಿ ಪಡೆಯುತ್ತಾರೆ.

ಈ ಆಚರಣೆಯ ನೇತೃತ್ವವನ್ನು ಅರಮನೆ ಪಾಲೆ ಜನಾಂಗದವರ ಮುಖ್ಯಸ್ಥರಾದ ಗಣೇಶ್ ಹಾಗೂ ಸೊಮ್ಮಯ್ಯನವರ ನೇತೃತ್ವದಲ್ಲಿ ಜರುಗುತ್ತದೆ.

ತಂಡ ತೆರಳುವ ಮಾರ್ಗ

ತಾ. ೧೧ ರಂದು ಅರಪಟ್ಟು ಭಗವತಿ ದೇವಸ್ಥಾನಕ್ಕೆ ತೆರಳಿ ದೇವತಕ್ಕರಾದ ಮುಕ್ಕಾಟ್ಟಿರ, ಕೋಡಿರ, ಅನ್ನಂಬಿರ, ನಂಬಿಯಪAಡ, ಬಿದ್ದೇರಿಯಂಡ ಐನ್‌ಮನೆ ಹಾಗೂ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮನೆಗೆ ತೆರಳಿದರು.

ತಾ. ೧೨ ರಂದು (ಇಂದು) ಚೇಲ್ಮಂಡ, ನೆರಪಂಡ, ಪಾಂಡAಡ, ಐತಿಚಂಡ ಐನ್‌ಮನೆಗೆ ತೆರಳುತ್ತಾರೆ.

ತಾ. ೧೩ ರಂದು ಚೇಲಾವರ, ಪೊನ್ನೋಲ, ಪುದಿಯೋದಿ ದೇವಾಲಯಕ್ಕೆ ತೆರಳಿ ನಂತರ ದೇವ ತಕ್ಕರಾದ ಅಮ್ಮಂಗಡ ನಂದ ಕುಮಾರ್, ಹೊಸೋಕ್ಲು ಐನ್‌ಮನೆ, ಬಾಚಮಂಡ, ನರಿಯಂದಡ ಐನ್‌ಮನೆ, ಭಗವತಿ ದೇವಾಲಯಕ್ಕೆ ತೆರಳಿ ದೇವತಕ್ಕರಾದ ಬೊವ್ವೇರಿಯಂಡ ಐನ್‌ಮನೆ, ಚೆಯ್ಯಂಡ, ಕೋಲೀರ, ಮಕ್ಕಿಮನೆ, ಮುಂಡಿಯ್ಯೊಳAಡ ಪಾಪು ಮಾಚಯ್ಯ ಅವರ ಮನೆಗೆ ತೆರಳುತ್ತಾರೆ.

ತಾ. ೧೪ ರಂದು ಕಿರುಂದಾಡು ಭಗವತಿ ದೇವಸ್ಥಾನ, ದೇವತಕ್ಕರಾದ ಮುಕ್ಕಾಟಿರ, ಮುಕ್ಕಾಟಿ, ನಾಳಿಯಂಡ, ನಾಟೋಳಂಡ, ಬೊಟ್ಟೋಳಂಡ, ತಾಪಂಡ ಮನೆಗೆ ತೆರಳುತ್ತಾರೆ.

ತಾ. ೧೫ ರಂದು ಕೊಕೇರಿ ಭಗವತಿ ದೇವಸ್ಥಾನ, ದೇವತಕ್ಕರಾದ ಮೂಡೆರ, ಚೇನಂಡ, ಕುಮ್ಮಂಡ, ಮಚ್ಚಂಡ, ಬಿದ್ದಂಡ, ಚೆರುವಾಳಂಡ, ಬೆಳಿಯಂಡ್ರ ಮನೆಗಳಿಗೆ ತೆರಳುವರು.

ತಾ. ೧೬ ಮತ್ತು ೧೭ ರಂದು ಮಂಞಪುರ, ಪೊಕ್ಕುಳಂಡ್ರ, ತೋಟಂಬೈಲು, ಬೆಳಿಯಂಡ್ರ ಮನೆಗೆ ತೆರಳಿ ಅಂದು ರಾತ್ರಿ ಅಜ್ಜಿ ಪೂಜೆ ನಡೆದು ಕೊನೆಗೊಳ್ಳಲಿದೆ.

ಆದಿಕಾಲದ ಕಳಂಜ ಕಳಿ, ಕಕ್ಕಡತಜ್ಜಿ ಆಚರಣೆ ಅಧುನಿಕತೆಯ ಸೋಗಿನಿಂದಾಗಿ ತೆರೆಮರೆಗೆ ಸರಿಯುತ್ತಿದೆ. ಇದನ್ನು, ಉಳಿಸಿಕೊಂಡು ಹೋಗಬೇಕಿದೆ. ಆಗ ಮಾತ್ರ ಪ್ರಾಚೀನ ಕಾಲದ ಕಲೆ, ಸಂಸ್ಕೃತಿ, ಆಚಾರ, ವಿಚಾರ, ಆಚರಣೆ, ಉಳಿಯಲು ಸಾಧ್ಯ.

- ಅಶ್ರಫ್