ಕಣಿವೆ, ಆ. ೧೧: ಕುಶಾಲನಗರ ಹೊಸ ತಾಲೂಕಾಗಿ ರಚನೆಗೊಂಡು ಬರೋಬ್ಬರಿ ಐದು ವರ್ಷಗಳು ಕಳೆದರೂ ಕೂಡ ಇದುವರೆಗೂ ಸೋಮವಾರಪೇಟೆಯಿಂದ ಪ್ರತ್ಯೇಕ ಕುಶಾಲನಗರ ತಾಲೂಕು ಪಂಚಾಯಿತಿ ಬೇರ್ಪಟ್ಟಿಲ್ಲ.

ಕಳೆದ ಜೂನ್ ೧ ರಿಂದ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಯನ್ನು ಸರ್ಕಾರ ನೇಮಿಸಿದ್ದು ಬಿಟ್ಟರೆ ಇದುವರೆಗೂ ಪ್ರತ್ಯೇಕವಾದ ಒಂದು ಹೊಸ ತಾಲೂಕು ಪಂಚಾಯಿತಿಗೆ ಬೇಕಾದ ಪೂರಕ ಸವಲತ್ತುಗಳು ದೊರಕಲೇ ಇಲ್ಲ.

ಮುಳ್ಳುಸೋಗೆ ಗ್ರಾಪಂನಲ್ಲಿ ಕಾರ್ಯಾಲಯ

ಹೊಸ ತಾಲೂಕು ಕಾರ್ಯಾಲಯಗಳ ನಿರ್ಮಾಣಕ್ಕೆ ಕುಶಾಲನಗರದಲ್ಲಿ ಸೂಕ್ತವಾದ ಕಟ್ಟಡಗಳಾಗಲೀ, ಖಾಲಿ ಜಾಗವಾಗಲೀ ಇಲ್ಲದ ಕಾರಣ ಈ ಹಿಂದೆ ಗ್ರಾಮ ಸೌಧವಾಗಿದ್ದ ಮುಳ್ಳುಸೋಗೆಯಲ್ಲಿ ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯಾಲಯ ತೆರೆಯಲಾಗಿದೆ.ಅಲ್ಲಿ ಕ್ಷೇತ್ರದ ಶಾಸಕರ ಕಾರ್ಯಾಲಯವೂ ಇದೆ. ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷರ ಕಾರ್ಯಾಲಯವೂ ಇದೆ.

ಹಾಗಾಗಿ ಈಗಾಗಲೇ ಸರ್ಕಾರದಿಂದ ಮಂಜೂರಾತಿಯಾಗಿರುವ ಪ್ರತ್ಯೇಕ ಕಾರ್ಯನಿರ್ವಹಣಾಧಿಕಾರಿ, ಲೆಕ್ಕಾಧಿಕಾರಿ ಹಾಗೂ ಹೊರಗುತ್ತಿಗೆಯ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ಸೇರಿ ಮೂವರು ಇದ್ದಾರೆ.

ಮಂಜೂರಾದ ಒಟ್ಟು ಹುದ್ದೆಗಳು ೫೨

ನೂತನ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ಸರ್ಕಾರದಿಂದ ಒಟ್ಟು ೫೨ ಹುದ್ದೆಗಳು ಮಂಜೂರಾತಿಯಾಗಿವೆ. ಈ ಪೈಕಿ ೧೨ ಮಂದಿ ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ, ೪೦ ಮಂದಿ ವಿವಿಧ ಗ್ರಾಮ ಪಂಚಾಯತಿಗಳಲ್ಲಿದ್ದಾರೆ.

ಅದರಲ್ಲಿ ಒಬ್ಬರು ಕಾರ್ಯನಿರ್ವಾಹಕ ಅಧಿಕಾರಿ, ಓರ್ವ ಸಹಾಯಕ ನಿರ್ದೇಶಕರು, ಓರ್ವ ಸಹಾಯಕ ಲೆಕ್ಕಾಧಿಕಾರಿ, ಓರ್ವ ತಾಲೂಕು ಯೋಜನಾಧಿಕಾರಿ, ಓರ್ವ ಪ್ರಥಮ ದರ್ಜೆ ಸಹಾಯಕ, ಓರ್ವ ಪ್ರಥಮ ದರ್ಜೆ ಲೆಕ್ಕ ಸಹಾಯಕ, ಇಬ್ಬರು ದ್ವಿತೀಯ ಹುದ್ದೆ ಸಹಾಯಕರು, ಒಂದು ಬೆರಳಚ್ಚುಗಾರ, ಒಬ್ಬರು ವಾಹನ ಚಾಲಕರು, ಇಬ್ಬರು ಡಿ ಗ್ರೂಪ್ ನೌಕರರು ಸೇರಿದ್ದಾರೆ.

ಇನ್ನು ಪಂಚಾಯತಿ ವ್ಯಾಪ್ತಿಯಲ್ಲಿ ೧೬ ಗ್ರಾಪಂಗಳಿದ್ದು ೧೬ ಮಂದಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ ಗ್ರೇಡ್-೧ ರಲ್ಲಿ ೮ ಹುದ್ದೆಗಳು, ಕಾರ್ಯದರ್ಶಿ ಗ್ರೇಡ್-೨ ರಲ್ಲಿ ೯, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ೭ ಮಂದಿ, ಹೀಗೆ ಒಟ್ಟು ೪೦ ಮಂದಿ ಸೇರಿ ೫೨ ಹುದ್ದೆಗಳು ಮಂಜೂರಾತಿಯಾಗಿವೆ.

ಸರ್ಕಾರದ ಸುತ್ತೋಲೆ ಇದ್ದರೂ ಕಾರ್ಯಗತವಾಗಿಲ್ಲ

ಹೊಸದಾಗಿ ರಚನೆಯಾದ ಮೈಸೂರು ಜಿಲ್ಲೆಯ ಸಾಲಿಗ್ರಾಮ, ದಕ್ಷಿಣ ಕನ್ನಡದ ಮುಲ್ಕಿ, ಉಳ್ಳಾಲ, ಚಿಕ್ಕಮಗಳೂರಿನ ಕಳಸ, ಕೊಡಗಿನ ಕುಶಾಲನಗರ, ಪೊನ್ನಂಪೇಟೆ ಹಾಗೂ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕು ಪಂಚಾಯಿತಿಗಳನ್ನು ಕೂಡಲೇ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರತ್ಯೇಕವಾಗಿ ಸೃಜಿಸಿಕೊಳ್ಳಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಬಾಲಪ್ಪ ಆದೇಶ ಹೊರಡಿಸಿದ್ದರೂ ಕೂಡ ಕೊಡಗು ಜಿಲ್ಲಾಡಳಿತ ಇದುವರೆಗೂ ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.

ಕುಶಾಲನಗರ ತಾಪಂ ಕಚೇರಿಯಲ್ಲಿ ಶೌಚಾಲಯವೂ ಇಲ್ಲ

ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಈಗ ಇರುವ ಕಟ್ಟಡ ಕಿಷ್ಕಿಂದೆಯAತಿದ್ದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಕೂರಲೂ ಜಾಗವಿಲ್ಲ. ಇನ್ನು ಸಾರ್ವಜನಿಕರ ಸಂದರ್ಶನಕ್ಕೂ ಜಾಗವಿಲ್ಲ.ಅಲ್ಲಿ ಈಗ ಇರುವ ಬೆರಳೆಣಿಕೆಯ ಸಿಬ್ಬಂದಿಗಳಿಗೆ ಅತೀ ಅವಶ್ಯವಾಗಿ ಬೇಕಾದ ಸೂಕ್ತ ಶೌಚಾಲಯವೂ ಇಲ್ಲದ ಕಾರಣ ಇಲ್ಲಿನ ಮಹಿಳಾ ಸಿಬ್ಬಂದಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಂಪ್ಯೂಟರ್ ಯಂತ್ರಗಳಿಲ್ಲ

ಯೋಜಿತ ಕುಶಾಲನಗರದ ಹೊಸ ತಾಲೂಕು ಪಂಚಾಯಿತಿಯಲ್ಲಿ ಕನಿಷ್ಟ ಏಳಕ್ಕೂ ಹೆಚ್ಚು ಗಣಕಯಂತ್ರಗಳು ಬೇಕಿದ್ದರೂ ಕೂಡ ಈಗ ಕೇವಲ ಒಂದೇ ಒಂದು ಗಣಕ ಯಂತ್ರವಿದ್ದು ಈಗಿರುವ ಹೊರಗುತ್ತಿಗೆ ಸಿಬ್ಬಂದಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಅಲ್ಲಿನ ಸಿಬ್ಬಂದಿಯೋರ್ವರು ‘ಶಕ್ತಿ’ಯೊಂದಿಗೆ ನೋವು ತೋಡಿಕೊಂಡರು.

ಅನುದಾನವೂ ಇಲ್ಲ

ನೂತನ ಕುಶಾಲನಗರ ಹೊಸ ತಾಲೂಕು ಪಂಚಾಯಿತಿಗೆ ಸರ್ಕಾರ ಇದೂವರೆಗೂ ನಯಾಪೈಸೆ ಅನುದಾನ ಕೂಡ ನೀಡಿಲ್ಲ. ಕಛೇರಿಯ ನಿರ್ವಹಣೆಗೂ ಹಣವಿಲ್ಲ ಎನ್ನಲಾಗಿದೆ. ಒಟ್ಟಾರೆ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿ ಬಿಡಲೀ, ಆದರೆ ತಾಲೂಕು ಪಂಚಾಯಿತಿ ನೂತನ ಕಾರ್ಯಾಲಯಕ್ಕೆ ಅಗತ್ಯವಿರುವ ಪೀಠೋಪಕರಣಗಳು, ಆಸನಗಳು, ಗಣಕಯಂತ್ರಗಳು ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸಲೇಬೇಕೆಂಬುದು ಕುಶಾಲನಗರ ತಾಲೂಕಿನ ನಾಗರಿಕರ ಆಗ್ರಹವಾಗಿದೆ. ಕೆ.ಎಸ್. ಮೂರ್ತಿ