ಚೆಯ್ಯಂಡಾಣೆ, ಆ. ೧೦: ಅಯ್ಯಂಗೇರಿ ಅಂಗನವಾಡಿ ಕೇಂದ್ರದಲ್ಲಿ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಯಿತು. ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಯಿಯ ಎದೆಹಾಲು ಮಗುವಿಗೆ ಅಮೃತವಾಗಿದೆ. ಹೆರಿಗೆ ಆದ ತಕ್ಷಣವೇ ಮಗುವಿಗೆ ಎದೆ ಹಾಲನ್ನು ಉಣಿಸಬೇಕು. ಮೊದಲು ಬರುವಂತಹ ಗಿಣ್ಣು ಹಾಲಿನಲ್ಲಿ ರೋಗನಿರೋಧಕ ಶಕ್ತಿ ಇರುವುದರಿಂದ ಮಗುವನ್ನು ರೋಗಗಳಿಂದ ಕಾಪಾಡುತ್ತದೆ. ತಾಯಿ ಪೌಷ್ಟಿಕ ಆಹಾರವನ್ನು ಪಡೆದು ಮಗುವಿಗೆ ಆರು ತಿಂಗಳವರೆಗೆ ಬರೀ ಎದೆಹಾಲನ್ನೇ ಕುಡಿಸಬೇಕೆಂದು ತಿಳಿಸಿದರು. ಇಲಾಖೆಯ ಯೋಜನೆಗಳಾದ ಮಾತೃವಂದನ, ಭಾಗ್ಯಲಕ್ಷ್ಮಿ ಯೋಜನೆ, ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕಾರ್ಯಕರ್ತರಾದ ಮಿಲನ ಮಾತನಾಡಿ, ಎದೆ ಹಾಲನ್ನು ಉಣಿಸುವುದರಿಂದ ತಾಯಿಯ ಸೌಂದರ್ಯ ಹೆಚ್ಚುತ್ತದೆ. ಗರ್ಭಕೋಶದ ಕ್ಯಾನ್ಸರ್, ಬ್ರೆಸ್ಟ್ ಕ್ಯಾನ್ಸರ್ ಇತ್ಯಾದಿಗಳನ್ನು ತಡೆಗಟ್ಟಬಹುದೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ೭ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಿ ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಲಾಯಿತು. ಈ ಸಂದರ್ಭ ಆರೋಗ್ಯ ಕಾರ್ಯಕರ್ತರಾದ ದೇವಿಪ್ರಸಾದ್, ಅಂಗನವಾಡಿ ಕಾರ್ಯಕರ್ತೆಯರಾದ ಜಮೀಲ, ಸ್ವಪ್ನ, ಸರೋಜಾ, ಗೊಂಬೆ, ಕೀರ್ತಿ, ಆಶಾ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಹಾಜರಿದ್ದರು.