ಶನಿವಾರಸಂತೆ, ಆ. ೧೦: ಪಟ್ಟಣದ ಭಾರತಿ ವಿದ್ಯಾಸಂಸ್ಥೆಯ ಪದವಿಪೂರ್ವ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ನೇಸರ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗಾಗಿ “ಹದಿ ಹರೆಯದ ಬಾಲಕಿಯರು ಎದುರಿಸುವ ಸವಾಲುಗಳು’’ ಎಂಬ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿ ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಉಪನ್ಯಾಸಕಿ ಪುಷ್ಪರಾಣಿ ಉಪನ್ಯಾಸ ನೀಡುತ್ತಾ, ಹದಿಹರೆಯದಲ್ಲಿ ಉಂಟಾಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು, ವೈಯಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ, ಆರೋಗ್ಯಕರ ಜೀವನ ಶೈಲಿ, ಆತ್ಮವಿಶ್ವಾಸ, ಸುರಕ್ಷತೆ ಹಾಗೂ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪಿ. ನರಸಿಂಹಮೂರ್ತಿ ಮಾತನಾಡಿ, ಹದಿಹರೆಯದ ವಿದ್ಯಾರ್ಥಿನಿಯರ ಜೀವನದ ಸರ್ವಾಂಗೀಣ ಅಭಿವೃದ್ಧಿಗೆ ಇಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಂತ ಅಗತ್ಯ ಎಂದರು.

ನೇಸರ ಇಕೋ ಕ್ಲಬ್ ಸಂಯೋಜಕಿ ಹೆಚ್.ಎನ್. ಮಂಗಳಾ, ಪ್ರಾಂಶುಪಾಲ ಎಸ್.ಜೆ. ಅಶೋಕ್, ಉಪನ್ಯಾಸಕ ಸೋಮಶೇಖರ್, ಶಿಕ್ಷಕರಾದ ಸಿ.ಜೆ. ಗೋಪಾಲ್, ಭವಾನಿ, ಸರೋಜಿನಿ, ಹಸೀನಾ, ಕಸಾಪ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜ್ ಇತರರು ಹಾಜರಿದ್ದರು. ಶಿಕ್ಷಕರಾದ ಗೋಪಾಲ್ ಸ್ವಾಗತಿಸಿ, ಮಂಗಳಾ ವಂದಿಸಿದರು.