ಮಡಿಕೇರಿ, ಆ. ೧೦: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಎದೆಹಾಲಿನ ಮಹತ್ವ ಹಾಗೂ ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸೋಮವಾರಪೇಟೆಯ ಮೇಲ್ವಿಚಾರಕಿ ಸಾವಿತ್ರವ್ವ ಉದ್ಘಾಟಿಸಿ ಮಾತನಾಡಿ, ತಾಯಿಯ ಎದೆಹಾಲಿನ ಮಹತ್ವ, ಮಗುವಿನ ಪೋಷಣೆಯ ಸರಿಯಾದ ವಿಧಾನದ ಬಗ್ಗೆ ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಮಾತನಾಡಿ, ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಅಕ್ಕ ಪಡೆ’ ಯೋಜನೆಯ ಕುರಿತು ಮಾಹಿತಿ ನೀಡಿದರು. ಕೊಡಗರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಾ ಮಾತನಾಡಿ, ತಾಯಿಯ ಎದೆಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಅದು ಮಗುವಿನ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಸಮುದಾಯ ಆರೋಗ್ಯಾಧಿಕಾರಿ ಮಾತನಾಡಿ ಜನನದ ಮೊದಲ ಆರು ತಿಂಗಳು ಮಗುವಿಗೆ ಕೇವಲ ತಾಯಿಯ ಎದೆಹಾಲನ್ನೇ ನೀಡುವುದು ಅತ್ಯಂತ ಅವಶ್ಯಕ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ಕ ಪಡೆ ಸಿಬ್ಬಂದಿಗಳಾದ ಹರೀಶ್, ಶೋಭ ಮತ್ತು ಚಾಂದಿನಿ, ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಯಶೋದ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ, ಅಂಗನವಾಡಿ ಸಹಾಯಕಿ ಸಂಧ್ಯಾ, ಆಶಾ ಕಾರ್ಯಕರ್ತೆ ಕವಿತಾ, ಮಕ್ಕಳ ತಾಯಂದಿರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.