ಮಡಿಕೇರಿ, ಆ. ೫: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ವಾರ್ಷಿಕ ಮಹಾಸಭೆ ತಾ. ೯ ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಸ್. ಸುಧೀರ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಕಾವೇರಿ ಹಾಲ್‌ನಲ್ಲಿ ಸಭೆ ನಡೆಯಲಿದ್ದು, ಸಂಘದ ಜಿಲ್ಲಾಧ್ಯಕ್ಷ ಸುಧೀರ್ ಎಸ್. ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ. ಸೈನಿಕ್ ಬೋರ್ಡ್, ಇಸಿಹೆಚ್‌ಎಸ್, ಕ್ಯಾಂಟಿನ್ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸ್ಟೇಟ್, ಸಿಬಿಎಸ್‌ಇ, ಐಸಿಎಸ್‌ಇ ವಿಭಾಗಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ನಿವೃತ್ತರಾದ ಬಳಿಕ ಉನ್ನತ ಹುದ್ದೆ ಅಲಂಕರಿಸಿರುವ ಸುಮಾರು ಐದು ಮಂದಿ ನಿವೃತ್ತ ಯೋಧರನ್ನು ಸನ್ಮಾನಿಸಲಾಗುತ್ತದೆ. ಹೊಸ ಸದಸ್ಯರ ನೋಂದಣಿ ಪ್ರಕ್ರಿಯೆಯೂ ನಡೆಯಲಿವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸೋಮಯ್ಯ, ಕಾರ್ಯದರ್ಶಿ ಡಿ.ಆರ್. ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿ ಕೆ.ಬಿ. ಲವ, ಮಡಿಕೇರಿ ಸಂಚಾಲಕ ಪಿ.ಕೆ. ಕುಟ್ಟಪ್ಪ, ಮಹಿಳಾ ವಿಭಾಗದ ಸಂಯೋಜಕಿ ಎಂ.ಪಿ. ಭವಾನಿ ಉಪಸ್ಥಿತರಿದ್ದರು.