ನಾಪೋಕ್ಲು, ಆ. ೫: ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಮಂಗಳವಾರ ಆಟಿ ಹಬ್ಬವನ್ನು ಚೇರಂಬಾಣೆ ಗೌಡ ಸಮಾಜದ ಸಭಾಂಗಣದಲ್ಲಿ ಆಚರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭಾಗಮಂಡಲ ಕಾವೇರಿ ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ಸೂರ್ತಲೆ ವಾರಿಜಾ ಮೋಹನ್ ಉದ್ಘಾಟಿಸಿ ಮಾತನಾಡಿ, ಹಿರಿಯರು ನಡೆದುಬಂದ ಹಾದಿಯನ್ನು ನಾವು ಎಂದೂ ಮರೆಯಬಾರದು. ನಮ್ಮ ಆಚಾರ-ವಿಚಾರ, ಪದ್ಧತಿ-ಪರಂಪರೆಗಳನ್ನು ಉಳಿಸಿ ಪೋಷಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದು ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಅವರು ಮಾತನಾಡಿ, ನಮ್ಮ ಪೂರ್ವಿಕರ ಆಹಾರ ಪದ್ಧತಿಯನ್ನು ನಾವು ಮರೆಯದೆ ಅನುಸರಿಸಬೇಕು. ಹಾಗೆಯೇ ಮುಂದಿನ ಪೀಳಿಗೆಗೂ ತಿಳಿಸಿಕೊಡಬೇಕು. ನಮ್ಮ ಹಿರಿಯರು ಸೇವಿಸುತ್ತಿದ್ದ ನೈಸರ್ಗಿಕ ಆಹಾರ ಇಂದು ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ. ಆಧುನೀಕರಣ, ಆಡಂಭರದ ಭರಾಟೆಯಲ್ಲಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಹಿಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಬಿರುಸಿನ ಮಳೆ ಇರುತ್ತಿದ್ದ ಕಾರಣ ಜನಜೀವನ ಬಹಳ ಕಷ್ಟಕರವಾಗಿರುತ್ತಿತ್ತು. ಈ ಕಾರಣದಿಂದ ಆಟಿ ತಿಂಗಳನ್ನು ಶೂನ್ಯ ಮಾಸವೆಂದು ಪರಿಗಣಿಸಿ ಯಾವುದೇ ಶುಭ ಕಾರ್ಯಗಳನ್ನು ಮಾಡುತ್ತಿರಲಿಲ್ಲ. ಮುಂದುವರಿದ ಈ ಕಾಲಘಟ್ಟದಲ್ಲಿ ಎಲ್ಲವೂ ಲಭ್ಯವಿರುವುದರಿಂದ ಆಟಿ ತಿಂಗಳನ್ನು ಸಂಭ್ರಮಾಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರುಗುಂದ ಗೌಡ ಸಮಾಜದ ಅಧ್ಯಕ್ಷರಾದ ಕೊಡಪಾಲು ಗಣಪತಿ ಅವರು ಮಾತನಾಡಿ, ನಮ್ಮ ಹಿರಿಯರ ಆಹಾರ ಪದ್ಧತಿಗಳು ಇತ್ತೀಚೆಗೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ತಿಳಿದುಕೊಳ್ಳುವಂತಾಗಿದೆ. ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಪರಸ್ಪರ ಹಿರಿಯ- ಕಿರಿಯರಲ್ಲಿ ಉತ್ತಮ ಬಾಂಧವ್ಯ ಮೂಡುತ್ತದೆ ಎಂದರು.
ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಒಕ್ಕೂಟ ಸದಾ ಚಟುವಟಿಕೆಯಿಂದ ಕ್ರಿಯಾಶೀಲರಾಗಿರಬೇಕು ಎನ್ನುವ ಉದ್ದೇಶದಿಂದ ಸಾಮಾನ್ಯವಾಗಿ ಎಲ್ಲಾ ಸಾಂಪ್ರದಾಯಿಕ ಹಬ್ಬ ಆಚರಣೆಗಳನ್ನು ಮಾಡುತ್ತಾ ಬರುತ್ತಿದೆ. ಇದರಿಂದ ಮಹಿಳೆಯರಿಗೆ ಉತ್ತಮ ಮಾಹಿತಿ, ಮನರಂಜನೆ ಹಾಗೂ ಮನೋಸ್ಥೆöÊರ್ಯ ದೊರೆಯುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕಾರುಗುಂದ ಯುವವೇದಿಕೆಯ ಅಧ್ಯಕ್ಷರಾದ ಪ್ರದೀಪ್ ಪಾರೆಮಜಲು, ದೇವನೂರು ಗೌಡ ಒಕ್ಕೂಟದ ನಿರ್ದೇಶಕರಾದ ಗುಡ್ಡೆರ ಲಕ್ಷು ಸೋಮಣ್ಣ ಅವರುಗಳು ಉಪಸ್ಥಿತರಿದ್ದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆಟಿ ಸೊಪ್ಪಿನ ರಸದಿಂದ ತಯಾರಿಸಿದ ವಿವಿಧ ಖಾದ್ಯಗಳು, ಮರಕೆಸುವಿನ ಖಾದ್ಯಗಳು, ಮಳೆಗಾಲ ದೊರೆಯುವಂತ ಫಲ ಪುಷ್ಪಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಬೈಮನ ಭವಾನಿ ದಿಲೀಪ್ ಮತ್ತು ಹೊಸಮನೆ ಶೋಭ ವೆಂಕಪ್ಪ ಅವರು ಪ್ರಾರ್ಥಿಸಿದರು. ಬೈಚನ ಸ್ವಾತಿ ಮಂದಪ್ಪ ಸ್ವಾಗತಿಸಿ ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿ ಬೈಮನ ಜ್ಯೋತಿ ತಿಮ್ಮಯ್ಯ ವಂದಿಸಿದರು.
ಮಧ್ಯಾಹ್ನದ ಭೋಜನಕ್ಕೆ ಆಟಿ ಹಬ್ಬದ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ಗೌಡ ಸಮಾಜದ ನಿರ್ದೇಶಕರು, ಮಹಿಳಾ ಒಕ್ಕೂಟದ ನಿರ್ದೇಶಕರು, ಯುವ ವೇದಿಕೆಯ ನಿರ್ದೇಶಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕೂಟದ ಸದಸ್ಯರು ಹಾಗೂ ಜನಾಂಗ ಬಾಂಧವರು ಭಾಗವಹಿಸಿದ್ದರು.