ಕರಿಕೆ, ಆ, ೫: ಇಲ್ಲಿಗೆ ಸಮೀಪದ ಚೆತ್ತುಕಾಯ ಎಂಬಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದಿಂದ ಮಳೆ ಹಾನಿ ಅನುದಾನದಡಿಯಲ್ಲಿ ನಿರ್ಮಿಸಿದ ಸಂಪರ್ಕಸೇತುವೆ ಉದ್ಘಾಟನೆಗೆ ಮೊದಲೇ ಕುಸಿಯುವ ಸ್ಥಿತಿಗೆ ತಲುಪಿದೆ.

ಚೆತ್ತುಕಾಯದಿಂದ ಹದಿಮೂರನೇ ಮೈಲು ಹಾಗೂ ಪಚ್ಚೆಪಿಲಾವು ಕಾಲೋನಿಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಗೆ ಕಳೆದ ೬ ತಿಂಗಳ ಹಿಂದೆ ನೂತನ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆ ಕಾಮಗಾರಿ ಸಂದರ್ಭದಲ್ಲಿ ಕಳಪೆ ಹಾಗೂ ಅಳತೆ ಪಟ್ಟಿಯಲ್ಲಿ ಇರುವಂತೆ ಕಾಮಗಾರಿ ಆಗದಿರುವ ಕುರಿತು ಸಾರ್ವಜನಿಕರು ಹಲವು ಬಾರಿ ಗುತ್ತಿಗೆದಾರ ಹಾಗೂ ಸಂಬAಧಿಸಿದ ಎಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ ಕಳಪೆ ಕಾಮಗಾರಿ ಕುರಿತು ಚಿತ್ರ ಸಮೇತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ವ್ಯಾಪಕವಾಗಿ ವೈರಲ್ ಆಗಿತ್ತು.

ಸೇತುವೆಯ ಒತ್ತಿನಲ್ಲಿ ತಡೆಗೋಡೆ ಕಾಮಗಾರಿ ನಿಯಮಾನುಸಾರ ಅಡಿಪಾಯ ನಿರ್ಮಾಣ ಮಾಡದೇ ಮಣ್ಣಿನ ಮೇಲ್ಭಾಗದಲ್ಲಿ ಕಾಮಗಾರಿಯನ್ನು ಬೇಜವಾಬ್ದಾರಿಯಿಂದ ಮಾಡಿದ ಪರಿಣಾಮ ಇದೀಗ ಸೇತುವೆ ಕಂಬದ ತಡೆಗೋಡೆಯ ಎರಡು ಬದಿಯ ಅಡಿಪಾಯ ಸಂಪೂರ್ಣ ಕೊಚ್ಚಿಹೋಗಿ ಉದ್ಘಾಟನೆಗೆ ಮೊದಲೇ ಕುಸಿಯುವ ಭೀತಿ ಎದುರಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅವರಿಂದಲೇ ಮರು ಕಾಮಗಾರಿ ನಿರ್ವಹಣೆ ಮಾಡಿಸಬೇಕೆಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಸುಧೀರ್ ಹೊದ್ದೆಟ್ಟಿ