ಸಿದ್ದಾಪುರ, ಆ. ೫: ಕಾಡಾನೆಗಳನ್ನು ಕಾರ್ಯಾ ಚರಣೆ ನಡೆಸುವುದು ಸ್ಥಗಿತಗೊಳಿಸಿ ಶಾಶ್ವತ ಯೋಜನೆಯನ್ನು ರೂಪಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಣ್ಣಂಗಾಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವೀರಾಜಪೇಟೆ ವಲಯ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಕಣ್ಣಂಗಾಲ, ಯಡೂರು ಮತ್ತು ಹಚ್ಚಿನಾಡು ಗ್ರಾಮಸ್ಥರು ಸೇರಿ ನಡೆಸಿದ ಸಭೆಯಲ್ಲಿ ಗ್ರಾಮಸ್ಥರು ಮತ್ತು ಬೆಳೆಗಾರರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗಾರರ ಹಾಗೂ ಕಾರ್ಮಿಕರ ಜೀವನ ದುಸ್ತರವಾಗಿದೆ ಎಂದರು.

ಜಿಲ್ಲೆಯಲ್ಲಿ ಆನೆ - ಮಾನವ ಸಂಘರ್ಷ ಹೆಚ್ಚಾಗುತ್ತಿದ್ದರೂ ಕೂಡ ಸರಕಾರ ಶಾಶ್ವತ ಯೋಜನೆಯನ್ನು ರೂಪಿಸದೆ ಗ್ರಾಮಸ್ಥರು ಭಯದಿಂದಲೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಡಾನೆಗಳ ಹಾವಳಿಯಿಂದಾಗಿ ಬೆಳೆದಂತಹ ಬೆಳೆಗಳು ಕೈಸೇರದೆ ಕೃಷಿಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಮಾನವನ ಮೇಲೆ ದಾಳಿ ನಡೆಸುತ್ತಿದ್ದು, ಶಾಲೆ - ಕಾಲೇಜುಗಳಿಗೆ ತೆರಳುವ ಮಕ್ಕಳಿಗೂ ಕೂಡ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು. ಕಾರ್ಮಿಕರು ಕಾಫಿ ತೋಟಗಳಲ್ಲಿ ಹಗಲಿನ ವೇಳೆ ಕೆಲಸ ಮಾಡಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಅಲ್ಲದೆ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಿಗಟ್ಟಲು ಪ್ರಯತ್ನ ನಡೆಸುತ್ತಿರುವುದರಿಂದ ಯಾವುದೇ ಪ್ರಯೋಜನ ಕಂಡುಬರುತ್ತಿಲ್ಲ. ಕಾಡಾನೆಗಳು ಕಾರ್ಯಾಚರಣೆ ಸಂದರ್ಭದಲ್ಲಿ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆಇಟ್ಟು ಅದನ್ನೇ ವಾಸಸ್ಥಾನವಾಗಿ ಮಾಡಿಕೊಂಡಿದೆ. ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆಗಳು ತೆರಳುವಾಗ ಕಾಫಿ ತೋಟಗಳಲ್ಲಿ ದಾಂಧಲೆ ನಡೆಸಿ ಫಸಲು ಇರುವ ಗಿಡಗಳನ್ನು ಧ್ವಂಸಗೊಳಿಸಿ ನಷ್ಟ ಉಂಟು ಮಾಡುತ್ತಿದೆ ಎಂದ ಗ್ರಾಮಸ್ಥರು ಈ ಹಿನ್ನೆಲೆಯಲ್ಲಿ ಕಣ್ಣಂಗಾಲ, ಯಡೂರು, ಹಚ್ಚಿನಾಡು ಗ್ರಾಮದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸದಂತೆ ಒತ್ತಾಯಿಸಿದ್ದಾರಲ್ಲದೆ, ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸ್ಥಳಾಂತರ ಮಾಡಲು ಶಾಶ್ವತ ಯೋಜನೆಯನ್ನು ಸರ್ಕಾರ ಹಾಗೂ ಅರಣ್ಯ ಇಲಾಖೆ ರೂಪಿಸಬೇಕೆಂದು ಗ್ರಾಮಸ್ಥರು ಆಗ್ರಹಪಡಿಸಿದರು.

ಅಲ್ಲದೆ ಅರಣ್ಯ ಇಲಾಖೆ ವತಿಯಿಂದ ನಷ್ಟಕ್ಕೆ ಒಳಗಾದ ಬೆಳೆಗಾರರಿಗೆ ನೀಡುತ್ತಿರುವ ಪರಿಹಾರವು ಅಲ್ಪ ಮೊತ್ತ ಆಗಿದ್ದು ಅದನ್ನು ಹೆಚ್ಚಿಸಬೇಕೆಂದು ರೈತರು ಒತ್ತಾಯಿಸಿದರು. ಅಧಿಕಾರಿಗಳೊಂದಿಗೆ, ವನ್ಯ ಪ್ರಾಣಿಗಳ ಹಾವಳಿಯ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ, ಕಣ್ಣಂಗಾಲ, ಯಡೂರು, ಹಚ್ಚಿನಾಡು ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಹಮ್ಮಿಕೊಳ್ಳುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಾಕಷ್ಟು ಪ್ರಯತ್ನಪಟ್ಟು ಕಾಡಿಗೆ ಓಡಿಸಿದರು ಮರಳಿ ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿದೆ. ಈ ಹಿನ್ನೆಲೆಯಲ್ಲಿ ರಾತ್ರಿವರೆಗೆ ಕಾರ್ಯಾಚರಣೆ ನಡೆಸಿದರು ಕೂಡ ಕೆಲವು ಕಾಡಾನೆಗಳು ಮರಿಯಾನೆಗಳೊಂದಿಗೆ ಸೇರಿ ಗುಂಪಿನಿAದ ಬೇರ್ಪಟ್ಟು ಕಾಫಿ ತೋಟಗಳಲ್ಲಿ ಉಳಿದುಕೊಂಡಿರುತ್ತದೆ. ಕಣ್ಣಂಗಾಲ, ಹಚ್ಚಿನಾಡು, ಗ್ರಾಮದಿಂದ ಕಾಡಿಗಟ್ಟುವ ಕಾಡಾನೆಗಳು ಅರಣ್ಯಕ್ಕೆ ತೆರಳಲು ಸುಮಾರು ೨೪ ಕಿಲೋಮೀಟರ್ ದೂರದವರೆಗೆ ತೆರಳಬೇಕಾಗಿದೆ.

ಆದರೆ ಆನೆಗಳು ಅರ್ಧದಿಂದಲೇ ಹಿಂತುರುಗಿ ಬರುತ್ತಿದ್ದು, ಕೆಲವೊಮ್ಮೆ ಸಿಬ್ಬಂದಿಗಳ ಮೇಲೆ ಕೂಡ ದಾಳಿಗೆ ಮುಂದಾಗುವ ಘಟನೆಗಳು ಕೂಡ ನಡೆದಿತ್ತು ಎಂದು ಮಾಹಿತಿ ನೀಡಿದರು. ಆನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಶಿವರಾಮ್ ಭರವಸೆ ನೀಡಿದರು. ಗ್ರಾಮಸ್ಥರ ಅಹವಾಲನ್ನು ಮೇಲಾಧಿಕಾರಿಗಳ ಗಮನಸೆಳೆದು ಸಮಸ್ಯೆಗೆ ಸ್ಪಂದಿಸುವುದಾಗಿ ತಿಳಿಸಿದರು. ಕಾಡಾನೆಗಳ ಹಾವಳಿಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಮಾಹಿತಿ ನೀಡಿದರು. ಇದೇ ಸಂದರ್ಭ ಗ್ರಾಮಸ್ಥರು ವನ್ಯಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವ ಸಂಬAಧ ಮೇಲಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಭೆಯಲ್ಲಿ ನೀಡಿದರು.

ಸಭೆಯಲ್ಲಿ ಗ್ರಾಮದ ಪ್ರಮುಖರು ಹಾಗೂ ಉಪವಲಯ ಅರಣ್ಯ ಅಧಿಕಾರಿ ಮನೋಜ್ ಹಾಗೂ ಸಿಬ್ಬಂದಿ ಹಾಜರಿದ್ದರು.