ವೀರಾಜಪೇಟೆ, ಆ. ೫: ವೀರಾಜಪೇಟೆ ತಾಲೂಕಿನ ವೀರಾಜಪೇಟೆ ವಲಯದ ಗಾಂಧಿನಗರ ಕಾರ್ಯಕ್ಷೇತ್ರದ ಶಿವಾನಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ವೀರಾಜಪೇಟೆಯ ಶಿಕ್ಷಕರ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಗೋವಿಂದ್ ಅವರು, ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ನೈತಿಕ ಮೌಲ್ಯ ಹಾಗೂ ನಮ್ಮ ನಾಡಿನ ಸಂಸ್ಕöÈತಿಯನ್ನು ಧಾರೆ ಎರೆಯುವುದು ಅತ್ಯಂತ ಅಗತ್ಯ. ಮಹಿಳೆಯರು, ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಹಿತಿ ರಜಿತ ಕಾರ್ಯಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯಿಂದ ಮಕ್ಕಳು ಸರಿ-ತಪ್ಪು ಅರಿವಿಲ್ಲದೆ ದುರಭ್ಯಾಸಗಳಿಗೆ ಬಲಿಯಾಗುತ್ತಿದ್ದಾರೆ. ತಂತ್ರಜ್ಞಾನದ ಈ ಸವಾಲಿನಿಂದ ಮಕ್ಕಳನ್ನು ಪಾರು ಮಾಡಲು ತಾಯಂದಿರು ಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ ಮಾತನಾಡಿ, "ಜ್ಞಾನವಿಕಾಸ ಕೇಂದ್ರಗಳ ಮೂಲಕ ಮಹಿಳೆಯರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರದ ಅಧ್ಯಕ್ಷರಾದ ಶೋಭಾ ಕೇಂದ್ರದ ನಿರಂತರ ಬೆಳವಣಿಗೆಗೆ ಮಾರ್ಗದರ್ಶನ ನೀಡುತ್ತಿರುವ ಅಧಿಕಾರಿಗಳ, ಸದಸ್ಯರ ಶ್ರಮವನ್ನು ಶ್ಲಾಘಿಸಿದರು. ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಬಳಿಕ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ಜರುಗಿದವು. ಸಮಾರಂಭದಲ್ಲಿ ನೋಡಲ್ ಅಧಿಕಾರಿ ಚೇತನ್, ಮೇಲ್ವಿಚಾರಕರಾದ ಶಿವಕುಮಾರ್, ಸೇವಾ ಪ್ರತಿನಿಧಿ ಮೀನಾಕ್ಷಿ ಹಾಗೂ ಶಿವಾನಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.