ಕೂಡಿಗೆ, ಆ. ೩: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಮತ್ತು ಕಾರ್ಯದರ್ಶಿಗಳಿಗೆ ಕರ್ತವ್ಯ, ಜವಾಬ್ದಾರಿ ಹಾಗೂ ಸಹಕಾರ ಕಾಯ್ದೆ ತಿದ್ದುಪಡಿ ಕುರಿತು ವಿಶೇಷ ಶಿಕ್ಷಣ ಕಾರ್ಯಾಗಾರ ಕಾರ್ಯಕ್ರಮವು ಕೂಡಿಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನೆರವೇರಿಸಿ ಮಾತಾನಾಡಿ, ಹಾಸನ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಹಾಸನದಲ್ಲಿ ರೂ. ೧,೦೦೦ ಕೋಟಿ ವೆಚ್ಚದಲ್ಲಿ ಸಿದ್ಧಗೊಂಡಿರುವ ಮೆಗಾ ಡೈರಿಯು ಇನ್ನು ಮೂರ್ನಾಲ್ಕು ತಿಂಗಳಲ್ಲಿ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ, ರಾಜ್ಯದಲ್ಲಿ ಒಟ್ಟು ೧೮ ಹಾಲು ಒಕ್ಕೂಟಗಳು ಇದ್ದು ಅದರಲ್ಲಿ ಹಾಸನದ ಹಾಲು ಒಕ್ಕೂಟವು ಪ್ರತಿ ಲೀಟರ್ ಹಾಲಿಗೆ ಹೆಚ್ಚು ಹಣ ನೀಡುವ ವ್ಯವಸ್ಥೆ ಮೆಗಾ ಡೈರಿ ಪ್ರಾರಂಭ ಅದ ಮೇಲೆ ಜಾರಿಗೊಳಿಸಲಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ರಾಬಿನ್ ದೇವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಾಲು ಅಮೃತ ಇದ್ದಂತೆ. ಎಲ್ಲಾ ಪೋಷಕಾಂಶಗಳು ಹಾಲಿನಲ್ಲಿ ಇದುವುದರಿಂದ ಅತಿ ಹೆಚ್ಚು ಹಾಲನ್ನು ಬಳಸುತ್ತೇವೆ. ಭಾರತ ವಿಶ್ವದಲ್ಲೇ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದೆ, ವಿಶ್ವದಲ್ಲಿ ಶೇ. ೨೪ರಷ್ಟು ಹಾಲು ಉತ್ಪಾದನೆಯನ್ನು ಭಾರತ ದೇಶ ಉತ್ಪಾದನೆ ಮಾಡುತ್ತಿದೆ. ಹಿಂದಿನ ಕಾಲದಲ್ಲಿ ಪ್ರತಿ ಮನೆಯಲ್ಲಿ ಹಸುಗಳ ಸಾಕಾಣಿಕೆಯನ್ನು ನಾವು ನೋಡುತ್ತಿದ್ದೆವು. ಆದರೆ ಈಗ ಹಸುಗಳ ಸಾಕಾಣಿಕೆ ಕಡಿಮೆಯಾಗುತ್ತಿದೆ. ಹೈನುಗಾರಿಕೆಯಿಂದ ಇಡೀ ಕುಟುಂಬವನ್ನು ನಿರ್ವಹಣೆ ಮಾಡಲಾಗುತ್ತಿದೆ. ಕೊಡಗಿನಲ್ಲಿ ೩೮ ಹಾಲು ಉತ್ಪಾದಕರ ಸಂಘಗಳು ಮಾತ್ರ ಇದ್ದು ಇದು ಹೆಚ್ಚಾಗಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಯೂನಿಯನ್ ಉಪಾಧ್ಯಕ್ಷ ಹೆಚ್.ಕೆ ಮಾದಪ್ಪ, ನಿರ್ದೇಶಕರಾದ ಕೆ.ಟಿ ಪರಮೇಶ್, ಬಲ್ಲಾರಂಡ ಮಣಿ ಉತ್ತಪ್ಪ, ಅಮೃತ್ ವಿ.ಸಿ., ಎಸ್.ಆರ್, ಸುನಿಲ್ ರಾವ್, ಎಂ.ಎA ಶಾಮಲಾ ಉಪಸ್ಥಿತರಿದ್ದರು. ಸಿ.ಕೆ ದೇವರಾಜ್ ಅವರು ಕುರಿತು ಉಪನ್ಯಾಸ ನೀಡಿದರು. ಎಂ.ಎA. ಶ್ಯಾಮಲಾ ಅವರು ಇತ್ತೀಚಿನ ಕಾಯ್ದೆ ತಿದ್ದುಪಡಿ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು.